ಕುಶಾಲನಗರ, ಮಾ. ೧೪: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ವಾರದ ಸಂತೆ ನಡೆಸಲು ಗ್ರಾಮ ಪಂಚಾಯಿತಿ ನಿರ್ಧಾರ ಕೈಗೊಂಡಿದೆ.

ಕೊಪ್ಪ ಮುಖ್ಯ ರಸ್ತೆ ಬದಿಯಲ್ಲಿರುವ ಸುಮಾರು ಒಂದುವರೆ ಎಕರೆ ಪ್ರದೇಶದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಈಗಾಗಲೇ ಕಾಮಗಾರಿ ನಡೆಯುತ್ತಿದೆ.

ಕೊಪ್ಪ ಗ್ರಾಮದ ಸುತ್ತಮುತ್ತ ಹತ್ತಾರು ಹಳ್ಳಿಗಳು ಇದ್ದು ಈ ಭಾಗದ ರೈತರು ಬೆಳೆಯುವ ತರಕಾರಿ ಹಣ್ಣು ಮತ್ತಿತರ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ. ಮುಖ್ಯ ರಸ್ತೆಯ ಒತ್ತಿನಲ್ಲಿ ಗ್ರಾಮ ಠಾಣಾ ಜಾಗ ಇರುವುದಾಗಿ ತಿಳಿಸಿದ ಅವರು ತಾತ್ಕಾಲಿಕವಾಗಿ ಮಾರುಕಟ್ಟೆ ಪ್ಲಾಟ್ಫಾರ್ಮ್ ನಲ್ಲಿ ವ್ಯಾಪಾರ ವಹಿವಾಟು ಕಲ್ಪಿಸಲು ಚಿಂತನೆ ಹರಿಸಲಾಗಿದೆ.

ಹೆದ್ದಾರಿ ಬದಿಯಲ್ಲಿ ತರಕಾರಿ ಮತ್ತು ಇತರ ವಸ್ತುಗಳನ್ನು ಮಾರುತ್ತಿರುವ ರೈತರಿಗೆ ಈ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅಧ್ಯಕ್ಷೆ ಶೀಲಾ, ಸದಸ್ಯರಾದ ನಾರಾಯಣ್, ರಾಜಪ್ಪ ತಿಳಿಸಿದ್ದಾರೆ.

ಕೊಪ್ಪ, ಬೈಲುಕೊಪ್ಪ, ಆವರ್ತಿ ಮುತ್ತಿನ ಮುಳ್ಳುಸೋಗೆ, ಸುತ್ತಮುತ್ತಲ ವ್ಯಾಪ್ತಿಯ ನೂರಾರು ಸಂಖ್ಯೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕುಶಾಲನಗರ ವಾರದ ಸಂತೆಯಲ್ಲಿ ಮಾರಾಟ ಮಾಡಲು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕೊಪ್ಪ ಸಂತೆ ಮಾರುಕಟ್ಟೆ ಪ್ರಾರಂಭವಾದರೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.