ಸಿದ್ದಾಪುರ, ಮಾ. ೧೪: ನಿರಂತರ ಕಾಡುಪ್ರಾಣಿಗಳ ಭಯದ ನಡುವೆ ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ತೋರಿದ ಪಾಲಿಬೆಟ್ಟದ ಸಮಾಜ ಸೇವಕ ಡಾ. ಎ.ಸಿ ಗಣಪತಿ ಅವರ ಕಾಳಜಿಯ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಸರ್ಕಾರಿ ಶಾಲೆಗೆ ಶಿಕ್ಷಣ ಕಲಿಯಲು ಬರುವ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಶಿಕ್ಷಕರುಗಳು ವಿದ್ಯಾರ್ಥಿಗಳ ಮನೆಗೆ ತೆರಳಿ ಮನವೊಲಿಸಿ ಶಾಲೆಗೆ ಕರೆತರುವ ಸಂದರ್ಭದಲ್ಲಿ ಕಾಡಾನೆಗಳು ದಾಳಿ ಮಾಡಿದ ಘಟನೆಗಳು ನಡೆದಿದ್ದವು. ದಿನನಿತ್ಯ ಬೆಳಿಗ್ಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು.
ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಹಾಗೂ ವಾಹನ ವ್ಯವಸ್ಥೆ ಮಾಡಬೇಕೆಂದು ಹಾಡಿಯ ಮುಖಂಡರುಗಳು ಹಲವು ಬಾರಿ ಸಂಬAಧಪಟ್ಟ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನ ಕಂಡಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಸಮಯವಾಗಿರುವುದರಿಂದ ಮಕ್ಕಳ ಭವಿಷ್ಯ ರೂಪಿಸುವುದು ಹೇಗೆ ಎಂಬ ಚಿಂತೆಯಲ್ಲಿ ಪೋಷಕರು ಹಾಗೂ ಶಿಕ್ಷಕರುಗಳು ಕೆಲವು ದಾನಿಗಳನ್ನು ಸಂಪರ್ಕಿಸಲು ಮುಂದಾದರು.
ಶಾಲಾ ಆಡಳಿತ ಮಂಡಳಿಯವರ ಶಿಕ್ಷಣ ಕಾಳಜಿಯ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಮಾಜ ಸೇವಕ ಪಾಲಿಬೆಟ್ಟದ ಡಾ. ಎ.ಸಿ ಗಣಪತಿ ಒಂದು ತಿಂಗಳವರೆಗೆ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಕಲ್ಪಿಸಿದರು.
ನುಡಿದಂತೆ ನಡೆದುಕೊಂಡು ಮಕ್ಕಳ ಪೋಷಕರೊಂದಿಗೆ ಧೈರ್ಯ ತುಂಬಿ ಶಾಲೆಗೆ ಕರೆತರುವ ಮೂಲಕ ಹಾಜರಾತಿ ಹಾಗೂ ಶಿಕ್ಷಣದಿಂದ ವಂಚಿತರಾಗದೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಕೇರಿರ ಅರುಣ್ ಕುಮಾರ್ ಮಾತನಾಡಿ ಗ್ರಾಮದಲ್ಲಿರುವ ಚೆನ್ನಂಗಿ ಸರ್ಕಾರಿ ಶಾಲೆ ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಿಂದ ಶಿಕ್ಷಕರುಗಳ ವಿಶೇಷ ಕಾಳಜಿಯೊಂದಿಗೆ ಮುನ್ನಡೆಯುತ್ತಿದ್ದು ಕಾಡಂಚಿನ ಮಕ್ಕಳೇ ಹೆಚ್ಚಾಗಿ ಶಾಲೆಗೆ ಆಗಮಿಸುತ್ತಿದ್ದಾರೆ.
ಈ ವ್ಯಾಪ್ತಿಯಲ್ಲಿ ದಿನನಿತ್ಯ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು, ಬೆಳೆಗಾರರು ನಡೆದಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ಶಿಕ್ಷಣ, ಭವಿಷ್ಯ ರೂಪಿಸಲು ಪಾಲಿಬೆಟ್ಟದ ಡಾ.ಎ.ಸಿ. ಗಣಪತಿಯವರು ಮಕ್ಕಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ತೋರಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ ನಮ್ಮ ಆದಿವಾಸಿ ಮಕ್ಕಳೇ ಹೆಚ್ಚಾಗಿ ಶಾಲೆಯಲ್ಲಿ ಕಲಿಯುತ್ತಿದ್ದು ಶಿಕ್ಷಕರುಗಳ ಕಾಳಜಿಯಿಂದ ವಿದ್ಯಾರ್ಥಿಗಳು ತಪ್ಪದೇ ಹಾಜರಾಗುತ್ತಿದ್ದಾರೆ.
ಹಾಡಿಯಿಂದ ಶಾಲೆಗೆ ಬರುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ಭಯದಿಂದ ಕೆಲವು ಮಕ್ಕಳು ಇತರರ ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮಕ್ಕಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಬೇಕೆಂದು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನ ಕಂಡುಬAದಿಲ್ಲ.
ಬೆಳಗಾರರು ಹಾಗೂ ದಾನಿಗಳಾದ ಪಾಲಿಬೆಟ್ಟದ ಡಾ. ಎ.ಸಿ. ಗಣಪತಿಯವರು ಆದಿವಾಸಿ ಮಕ್ಕಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ. ಸುತ್ತಮುತ್ತಲ ದಾನಿಗಳಿಂದ ಶಾಲೆ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ ಸುಷಾ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯಾಗಿದ್ದು ಬಸ್ ಸಂಚಾರ ಇಲ್ಲದೆ ಕಾಡು ಪ್ರಾಣಿಗಳ ಭಯದ ನಡುವೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ. ಇಲಾಖೆ ಹಾಗೂ ದಾನಿಗಳ ಸಹಕಾರದಿಂದ ಎಲ್ಲಾ ಸೌಲಭ್ಯವು ಇದ್ದು ಪ್ರಾಣಿಗಳ ಭಯದಿಂದ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು.
ದಾನಿಗಳಾದ ಡಾ. ಎ.ಸಿ. ಗಣಪತಿಯವರು ಮಕ್ಕಳ ಅನುಕೂಲಕ್ಕಾಗಿ ಒಂದು ತಿಂಗಳ ಮಟ್ಟಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಮತ್ತಷ್ಟು ದಾನಿಗಳು ಮುಂದೆ ಬಂದು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸಿಆರ್ಪಿಗಳಾದ ಕರುಂಬಯ್ಯ, ಕೇಶವಮೂರ್ತಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಬೇಬಿ, ಶಿಕ್ಷಕರಾದ ಸತೀಶ್, ಪ್ರತಿಮ, ಮಂಜುಳಾ, ಪೋಷಕರಾದ ಯಶೋಧ, ಕವಿತ, ಮಲ್ಲಪ್ಪ, ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. -ಎಸ್.ಎಂ ಮುಬಾರಕ್