ವೀರಾಜಪೇಟೆ, ಮಾ. ೧೪: ಸೂರಿಲ್ಲದವರಿಗೆ ಸೂರು ಒದಗಿಸಿ, ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಿ ಕೊಟ್ಟು, ಬಡವರು ವಾಸಿಸುತ್ತಿರುವ ಸ್ಥಳಗಳಿಗೆ ಹಕ್ಕುಪತ್ರ ಒದಗಿಸಿಕೊಡುವ ಕಾರ್ಯಕ್ಕಿಂತ ಸಾರ್ಥಕ ಕೆಲಸ ಬೇರೆ ಯಾವುದು ಇಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕ್ಷೇತ್ರದ ಶಾಸಕರೂ ಆಗಿರುವ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆಯ ಪುರಭವ£ Àದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಇರುವವರಿಗೆ ೯೪ ಸಿ. ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಶಾಸಕನಾಗಿ ಆಯ್ಕೆಯಾದ ಬಳಿಕ ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಮನೆಗೆ ಭೇಟಿ ನೀಡಿ ತಮ್ಮ ಜಾಗಕ್ಕೆ ಬೇಕಾದ ಹಕ್ಕುಪತ್ರ ಹಾಗೂ ನಿವೇಶನ ಒದಗಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದೆಲ್ಲವನ್ನು ಮನಗಂಡು ಬಡವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಲಾಗಿತ್ತು. ಕಂದಾಯ ಸಚಿವರ ನಿರ್ದೇಶನದಂತೆ ಅಕ್ರಮ ಸಕ್ರಮ ತಾಲೂಕು ಸಮಿತಿ ರಚನೆ ಮಾಡಿ ಅಧ್ಯಕ್ಷರುಗಳನ್ನು ನೇಮಕ ಮಾಡಿ ಅವರ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಇದು ನೈಜ ಫಲಾನುಭವಿಗಳಿಗೆ ಸಿಗಬೇಕಾದ ಹಕ್ಕುಪತ್ರ ಹಾಗೂ ನಿವೇಶನಗಳ ದಾಖಲಾತಿ. ಉಳಿದಷ್ಟು ಅರ್ಜಿಗಳ ಪರಿಶೀಲನೆ ಬಳಿಕ ಮುಂದಿನ ದಿನಗಳಲ್ಲಿ ಅರ್ಹರನ್ನು ಗುರುತಿಸಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ನಾವು ಜನರ ಸೇವೆಗೆಂದೆ ಬಂದವರು, ಬಡವರ ಸೇವೆಯೇ ನನ್ನ ಗುರಿ. ನಾನು ರಾಜಕೀಯ ಮಾಡಲು ಬಂದಿಲ್ಲ ಎಂದರಲ್ಲದೆ ಇಲ್ಲಿ ಕಾನೂನು ದುರ್ಬಳಕೆ ಸಾಧ್ಯವಿಲ್ಲ. ಅಭಿವೃದ್ಧಿ ಆಗುತ್ತಿಲ್ಲ ಅಂತ ಕೆಲವರು ಟೀಕೆ ಮಾಡುತ್ತಿದ್ದಾರೆ. ಬಡಜನರಿಗೆ ಸಿಗುತ್ತಿರುವ ಯೋಜನೆಗಳ ಸದ್ಬಳಕೆ, ವೀರಾಜಪೇಟೆ ಕ್ಷೇತ್ರಕ್ಕೆ ೨೬೦ ಕೋಟಿಗೂ ಹೆಚ್ಚಿನ ಅನುದಾನದ ಕಾಮಗಾರಿಗಳಿಗೆ ಚಾಲನೆ ಕೊಟ್ಟಿರುವುದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು. ನೀಚ ರಾಜಕಾರಣ ಕೈ ಬಿಡಬೇಕು, ಅಭಿವೃದ್ಧಿ ಬಗ್ಗೆ ಕಾಳಜಿ ಇರುವವರು ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿಯ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಎಚ್.ಎನ್. ರಾಮಚಂದ್ರ ಮಾತನಾಡಿ ೨೦೧೯ರ ಸಾಲಿನಲ್ಲಿ ಕೊಡಗಿನಲ್ಲಿ ಉಂಟಾದ ಭಾರೀ ಮಳೆಯಿಂದ ಕೆದಮುಳ್ಳೂರು ತೋರ ಗ್ರಾಮದಲ್ಲಿ ಉಂಟಾದ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಸೇರಿದಂತೆ ವಿಧವಾ ವೇತನ, ಅಂಗವಿಕಲ ವೇತನ, ಸಂದ್ಯಾ ಸುರಕ್ಷಾ ಯೋಜನೆ ರಾಷ್ಟಿçÃಯ ವೃದ್ಧಾಪ್ಯ ವೇತನದ ಮಂಜೂರಾತಿ ಆದೇಶವನ್ನು ಒಟ್ಟು ೮೭ ಜನರಿಗೆ ನೀಡಲಾಗುತ್ತಿದೆ ಎಂದರು.
ಬಳಿಕ ಶಾಸಕರು ಕೆದಮುಳ್ಳೂರಿನ ತೋರ ಗ್ರಾಮದ ೩ ಜನ ಸಂತ್ರಸ್ತರಿಗೆ ಎರಡು ಮುಕ್ಕಾಲು ಸೆಂಟ್ ಸರ್ಕಾರಿ ಜಾಗವನ್ನು ಗುರುತಿಸಿ ಇವರಿಗೆ ಮನೆ ಕಟ್ಟುವ ಸಲುವಾಗಿ ಹಕ್ಕುಪತ್ರಗಳನ್ನು ವಿತರಿಸಿದರು. ಅದೇ ರೀತಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ, ಮಂಜೂರಾತಿ ಪತ್ರ ವಿತರಿಸಿದರು.
ಸರಕಾರದ ವಿವಿಧ ಪಿಂಚಣಿ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಯಾಪ್ಯವೇತನ ಸೇರಿದಂತೆ ವಿವಿಧ ಯೋಜನೆಯ ಒಟ್ಟು ೮೭ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.
ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಆರ್. ಕೆ. ಅಬ್ದುಲ್ ಸಲಾಂ, ಸದಸ್ಯರಾದ ಕೋಳೆರ ಟೀನಾ, ಪಿ.ಬಿ. ಅಯ್ಯಪ್ಪ, ವಿ.ಕೆ. ಸತೀಶ್, ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ವಿರಾಜಪೇಟೆ ಪುರಸಭೆ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ದೇಚಮ್ಮ ಕಾಳಪ್ಪ, ಅಗಸ್ಟಿನ್ ಬಿನ್ನಿ, ಫಸಿಯಾ ತಬ್ಸಮ್, ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ರಜನಿಕಾಂತ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಎ.ವಿ. ಮಂಜುನಾಥ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಸಿಬ್ಬಂದಿ ವರ್ಗ, ಕಂದಾಯ ಇಲಾಖೆ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಯೋಜನೆಗಳ ಫಲಾನುಭವಿಗಳು ಹಾಜರಿದ್ದರು.