ಸೋಮವಾರಪೇಟೆ, ಮಾ. ೧೨: ಎಲ್ಲೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಆಹಾರಕ್ಕಾಗಿ ಹಚ್ಚಹಸಿರಿನಂತಿರುವ ಕಾಫಿ ತೋಟಕ್ಕೆ ತೆರಳಲು ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೇಡ್ನ ತಡೆ- ಪರಿಣಾಮ ಅನ್ಯ ಮಾರ್ಗವಿಲ್ಲದೇ ಹೆದ್ದಾರಿಯಲ್ಲೇ ಗಜರಾಜನ ಪಯಣ!
ಇಂತಹ ಸನ್ನಿವೇಶ ಇದೀಗ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವೆನಿಸಿವೆ. ಈ ಭಾಗದ ಜನರು ಕಾಡಾನೆಗಳೊಂದಿಗೆ ಪ್ರತಿದಿನ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
(ಮೊದಲ ಪುಟದಿಂದ) ಕೋವರ್ಕೊಲ್ಲಿ-ಐಗೂರು ಮಾರ್ಗದಲ್ಲಿ ಅರಣ್ಯದಿಂದ ಟಾ ಟಾ ಕಾಫಿ ತೋಟಕ್ಕೆ-ತೋಟದಿಂದ ಅರಣ್ಯಕ್ಕೆ ಪ್ರತಿದಿನ ಸಂಚರಿಸುತ್ತಿದ್ದ ಕಾಡಾನೆಗಳು ಇತ್ತೀಚೆಗೆ ಐಗೂರು, ಕಾಜೂರು, ಯಡವಾರೆ ಭಾಗದ ಜನವಸತಿ ಪ್ರದೇಶಗಳತ್ತ ಲಗ್ಗೆಯಿಡುತ್ತಿವೆ.
ಬಿಸಿಲ ತಾಪಕ್ಕೆ ಅರಣ್ಯದಲ್ಲಿರುವ ತೇಗದ ಮರಗಳು ಒಣಗಿ ಹೋಗಿದ್ದು, ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬಟಾಬಯಲಾಗಿದೆ. ಕುಡಿಯಲು ನೀರು/ತಿನ್ನಲು ಆಹಾರವೂ ಇಲ್ಲದೇ ಇರುವ ಸನ್ನಿವೇಶದಲ್ಲಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿವೆ. ತೋಟದಲ್ಲಿ ದೊರಕುವ ಹಲಸು, ಬೈನೆ, ಇತ್ಯಾದಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಹಿಂದೆ ಇದ್ದ ಆನೆ ಕಾರಿಡಾರ್ಗೆ ತಡೆಯೊಡ್ಡಿರುವ ಪರಿಣಾಮ ಎಲ್ಲೆಂದರಲ್ಲಿ ರಸ್ತೆ ದಾಟುತ್ತಿವೆ.
ರಾಜ್ಯ ಹೆದ್ದಾರಿಯನ್ನೇ ಕಾಡಾನೆಗಳು ಕಾರಿಡಾರ್ನಂತೆ ಮಾಡಿಕೊಂಡಿವೆ. ರಸ್ತೆಯಲ್ಲೇ ಅತ್ತಿಂದಿತ್ತ-ಇತ್ತಿAದತ್ತ ತೆರಳುತ್ತಿರುವ ಕಾಡಾನೆಗಳು, ಸ್ಥಳೀಯರ ನೆಮ್ಮದಿ ಕೆಡಿಸಿರುವುದು ಮಾತ್ರವಲ್ಲ; ಜೀವ ಭಯವನ್ನೂ ಹುಟ್ಟುಹಾಕಿದೆ.
ಈ ಹಿಂದೆ ಅರಣ್ಯದಿಂದ ನೇರವಾಗಿ ಟಾಟಾ ಕಾಫಿ ಎಸ್ಟೇಟ್ಗೆ ತೆರಳುತ್ತಿದ್ದ ಕಾಡಾನೆಗಳಿಗೆ ಇತ್ತೀಚಿನ ವರ್ಷದಿಂದ ಸೋಲಾರ್ ಬೇಲಿ ತಡೆಯಾಗಿದೆ. ಕೋವರ್ಕೊಲ್ಲಿಯಿಂದ ಐಗೂರುವರೆಗೆ ಹಬ್ಬಿರುವ ತೋಟದ ಬೇಲಿಗೆ ಸೋಲಾರ್ ಅಳವಡಿಸಿರುವದರಿಂದ ಕಾಡಾನೆಗಳಿಗೆ ದಿಕ್ಕು ತೋಚದಂತಾಗಿ ಐಗೂರು, ಕಾಜೂರು, ಯಡವಾರೆಗಳಿಗೆ ತೆರಳುತ್ತಿವೆ.
ಆದರೆ ಕಾಡಾನೆಗಳಿಗೆ ಬೇಕಾದ ಆಹಾರ ಮಾತ್ರ ಸಾವಿರಾರು ಎಕರೆ ಅರಣ್ಯ ಪ್ರದೇಶ ಹುಡುಕಾಡಿದರೂ ಲಭಿಸುವದಿಲ್ಲ. ಪರಿಣಾಮ ಕಾಫಿ ಎಸ್ಟೇಟ್ನೊಳಗೆ ಬೆಳೆದಿರುವ ಹಲಸು, ಬೈನೆ ಸೇರಿದಂತೆ ಇನ್ನಿತರ ಆಹಾರಗಳನ್ನು ತಿನ್ನಲು ಆನೆಗಳು ರಸ್ತೆಯ ಮೂಲಕ ಸಂಚರಿಸುತ್ತಿವೆ. ಕಳೆದ ೨೦ ದಿನಗಳ ಹಿಂದೆ ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆಯೇ ದಾಳಿಗೆ ಯತ್ನಿಸಿದ ಕಾಡಾನೆ, ಮಾರನೇ ದಿನ ಅರಣ್ಯ ಇಲಾಖಾ ಕಚೇರಿಯ ಆವರಣದೊಳಗೆ ಓಡಾಟ ನಡೆಸಿ, ನಂತರ ಹಿಂತಿರುಗಿದೆ.
ಕೋವರ್ಕೊಲ್ಲಿಯಿAದ ಕಾಜೂರು ಜಂಕ್ಷನ್, ಕಾಜೂರು ಜಂಕ್ಷನ್ನಿAದ ಯಡವಾರೆ-ಕಾಜೂರು ರಸ್ತೆಯಲ್ಲಿ ಸಂಚರಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಅರಣ್ಯದಿಂದ ತೋಟಕ್ಕೆ-ತೋಟದಿಂದ ಅರಣ್ಯಕ್ಕೆ ಕಾಡಾನೆಗಳು ಸಂಚರಿಸುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಜಾಗ್ರತೆಯಿಂದ ತೆರಳಬೇಕಿದೆ.
ಜನವಸತಿ ಪ್ರದೇಶದಲ್ಲಿರುವ ಕಾಡಾನೆಗಳನ್ನು ದೂರದ ಅರಣ್ಯಕ್ಕೆ ಸ್ಥಳಾಂತರಿಸಬೇಕು. ತಪ್ಪಿದ್ದಲ್ಲಿ ಅರಣ್ಯದೊಳಗೆ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾಡಾನೆಗಳು ರಸ್ತೆಗೆ ಬರುವ ಸಂದರ್ಭ ವಾಹನ ಸವಾರರಿಗೆ ಮಾಹಿತಿ ನೀಡಬೇಕು. ಕೋವರ್ಕೊಲ್ಲಿ ಜಂಕ್ಷನ್ನಿAದ ಕಾಜೂರು ಜಂಕ್ಷನ್ವರೆಗೆ ಕಾಡಾನೆಗಳ ಚಲನವಲನ ಅರಿಯಲು ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.