ಬಂಡೀಪುರ, ಮಾ. ೧೧: ವನ್ಯಜೀವಿ ಸಂಘರ್ಷ, ಕಳ್ಳಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಸ್ವಾಗತ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಸಭಾಂಗಣದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರೊಂದಿಗೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಪ್ರಥಮ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ವನ್ಯ ಜೀವಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದಕ್ಕೆ ಸಂಚರಿಸುತ್ತವೆ. ಹಲವಾರು ಶತಮಾನಗಳಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಆನೆಗಳು ಮುಕ್ತವಾಗಿ ಓಡಾಡುತ್ತಿದ್ದು, ಯಾವುದೇ ವನ್ಯ ಜೀವಿಗೆ ರಾಜ್ಯದ ಗಡಿಯ ಮಿತಿ ಇರುವುದಿಲ್ಲ. ಆನೆ ಕಾರಿಡಾರ್ ಇದೆ. ಹುಲಿಗಳು ಕೂಡ ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಈ ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಅಮೂಲ್ಯ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಇದಕ್ಕೆ ಒಂದು ರೂಪ ನೀಡಲಾಗುವುದು ಎಂದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ದಕ್ಷಿಣದ ಈ ಮೂರೂ ರಾಜ್ಯಗಳಲ್ಲಿರುವ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಕೃತಿ ಪರಿಸರ ಉಳಿಸಲು ಪರಸ್ಪರ ಸಹಯೋಗ ನೀಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ವನ್ಯಜೀವಿಗಳ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ವಸತಿ ಪ್ರದೇಶಗಳು ಅರಣ್ಯದಂಚಿಗೆ ಬರುತ್ತಿರುವ ಕಾರಣ ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹೀಗಾಗಿ ಕಾಡಿನಂಚಿನ ವಸತಿ ಪ್ರದೇಶಗಳ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಸಭೆಯ ಮುಖ್ಯಾಂಶಗಳು: ಸಹಯೋಗದ ಉಪಕ್ರಮಗಳು

೧. ಹಂಚಿಕೆಯ ಹೊಣೆಗಾರಿಕೆ ಸಮ್ಮತಿ: ವನ್ಯಜೀವಿಗಳ ಆವಾಸಸ್ಥಾನ ಗಳನ್ನು ಗುರುತಿಸುವುದು ಮತ್ತು ವಿಸ್ತರಿಸುತ್ತಿರುವುದು. ವಿಸ್ತರಣೆಯಾಗುತ್ತಿರುವ ವಸತಿ ಪ್ರದೇಶಗಳ ನಡುವೆಯೂ ಅರಣ್ಯ ಸಂರಕ್ಷಿಸುವ ಬದ್ಧತೆ.

೨. ಸಹಯೋಗದ ಚಾರ್ಟರ್: ಗಡಿಗಳನ್ನು ಮೀರಿ, ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಹೃತ್ಪೂರ್ವಕ ಪ್ರತಿಜ್ಞೆ.

೩. ಕಾರ್ಯತಂತ್ರದ ಸಮನ್ವಯ: ತಡೆರಹಿತ ಸಹಯೋಗ, ರಚನಾತ್ಮಕ ಮಾಹಿತಿಯ ಹಂಚಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸವಾಲುಗಳ ವಿರುದ್ಧ ಜಂಟಿ ಪ್ರಯತ್ನ.

೪. ಸಂಪನ್ಮೂಲ ವಿನಿಮಯ ಕಾರ್ಯಕ್ರಮ: ಸಮನ್ವಯತೆಯನ್ನು ಸಂಕೇತಿಸುವ ಈ ಕಾರ್ಯಕ್ರಮವು ನಿರ್ಣಾಯಕ ಸಂಪನ್ಮೂಲಗಳು, ಪರಿಣತಿ ಮತ್ತು ಜ್ಞಾನದ ವಿನಿಮಯವನ್ನು ಸುಗಮಗೊಳಿಸುತ್ತದೆ.

೫. ವನ್ಯಜೀವಿ ಸಂಖ್ಯೆಯ ಅಂದಾಜು ಮತ್ತು ಜಂಟಿ ಕಾರ್ಯಾಚರಣೆಗಳು: ವನ್ಯಜೀವಿಗಳ ಸಂಖ್ಯೆಯ ಆಧಾರದ ಮೇಲೆ ಮತ್ತು ಸಂಘಟಿತ ಕಾರ್ಯಾಚರಣೆಗಳ ಮೂಲಕ ಮಾಹಿತಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು.

೬. ಸಲಹಾ ಮಂಡಳಿ: ವನ್ಯಜೀವಿ ಸಂರಕ್ಷಣಾ ತಜ್ಞರನ್ನು ಒಳಗೊಂಡು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಲಹಾ ಮಂಡಳಿ ರಚಿಸುವ ಪ್ರಸ್ತಾಪ.

೭. ವಿಮರ್ಶೆ ಮತ್ತು ಹೊಂದಾಣಿಕೆ: ಸುಸ್ಥಿರ ಉತ್ಕೃಷ್ಟತೆ ಮತ್ತು ವಿಕಸನಗೊಳ್ಳುತ್ತಿರುವ ಜವಾಬ್ದಾರಿಗಳಿಗೆ ಹೊಂದಿಕೊಳ್ಳುವಿಕೆಗಾಗಿ ಆಡಳಿತದಲ್ಲಿ ನಿಯಮಿತ ಪರಾಮರ್ಶೆ.

ಭವಿಷ್ಯದ ಹಂಚಿಕೆಯ ದೃಷ್ಟಿಕೋನ: ಮಾನವ ಮತ್ತು ವನ್ಯಜೀವಿಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಜವಾಬ್ದಾರಿಯುತ ಸಂರಕ್ಷಣೆಯ ಪರಂಪರೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಆಡಳಿತಾತ್ಮಕ ಗಡಿಗಳನ್ನು ಮೀರಿದ ಹಂಚಿಕೆಯ ದೃಷ್ಟಿಕೋನವನ್ನು ಈ ಚಾರ್ಟರ್ ಒಳಗೊಂಡಿದೆ. -ಎಸ್.ಎA. ಮುಬಾರಕ್