ಕೂಡಿಗೆ, ಮಾ. ೯: ನದಿಯಲ್ಲಿ ಈಜುವ ಸಂದರ್ಭ ಮುಳುಗಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಕೂಡಿಗೆಯಲ್ಲಿ ಗುರುವಾರ ಸಂಜೆ ಕಾವೇರಿ ನದಿಗೆ ಮೂವರು ಸ್ನಾನಕ್ಕೆಂದು ಇಳಿದ ಸಂದರ್ಭ ಮೂವರು ನೀರು ಪಾಲಾಗಿದ್ದರು. ಈ ಪೈಕಿ ಚಿಕ್ಕತ್ತೂರಿನ ಶ್ರೀನಿವಾಸ್ ಅಪ್ಪು (೨೩) ಎಂಬಾತನ ಮೃತದೇಹ ಘಟನೆ ನಡೆದ ದಿನದಂದು ಪತ್ತೆಯಾಗಿತ್ತು. ಕಣಿವೆ ಸಮೀಪದ ಹಕ್ಕೆ ಗ್ರಾಮದ ಸಚಿನ್ (೨೫), ಮುಳ್ಳುಸೋಗೆ ಜನತಾ ಕಾಲೋನಿಯ ವಿನೋದ್ (೨೫) ಮೃತದೇಹಗಳು ಶುಕ್ರವಾರ ಪತ್ತೆಯಾದವು. ಅಗ್ನಿ ಶಾಮಕ ದಳ ಹಾಗೂ ದುಬಾರೆ ರಿವರ್ ರ್ಯಾಫ್ಟ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಮೇಲೆತ್ತಿದರು. ನಿಂತ ನೀರಿನಲ್ಲಿ ಕಲ್ಲುಗಳ ನಡುವೆ ನದಿಗಿಳಿದಿದ್ದ ಮೂವರ ಪೈಕಿ ಸಚಿನ್ ಮುಳುಗು ವುದನ್ನು ಕಂಡು ರಕ್ಷಿಸಲು ಇನ್ನಿಬ್ಬರು ಸ್ನೇಹಿತರು ಹೋದಾಗ ದುರ್ಘಟನೆ ಸಂಭವಿಸಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್ಪಿ ಗಂಗಾಧರಪ್ಪ, ತಹಶೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಮರಣೋತ್ತರ ಪರೀಕ್ಷೆ ಬಳಿಕ ವಾರಿಸುದಾರರಿಗೆ ಒಪ್ಪಿಸಲಾಗಿದೆ.