ವೀರಾಜಪೇಟೆ, ಮಾ. ೯: ವೀರಾಜಪೇಟೆ ಪಟ್ಟಣಕ್ಕೆ ಅಮೃತ್-೨.೦ ಯೋಜನೆಯಡಿ ಬೇತ್ರಿ ಗ್ರಾಮದ ಕಾವೇರಿ ನದಿ ಮೂಲದಿಂದ ಹಾಲಿ ನೀರು ಸರಬರಾಜು ವ್ಯವಸ್ಥೆಯ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪೊನ್ನಣ್ಣ ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷವೂ ತಲೆದೋರುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೂ. ೫೮ ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ವೀರಾಜಪೇಟೆ ಪಟ್ಟಣಕ್ಕೆ ೫ ಲಕ್ಷ ಲೀಟರ್ ನೀರು ಸಂಗ್ರಹಣೆ ಸಾಮರ್ಥ್ಯ ಇದ್ದು ಹೊಸ ಯೋಜನೆಯಿಂದ ೨೫ ಲಕ್ಷ ಲೀಟರ್ ಸಾಮರ್ಥ್ಯ ಹೊಂದಲಿದ್ದು ಇದು ವೀರಾಜಪೇಟೆ ಪಟ್ಟಣದ ಜನತೆಗೆ ವರದಾನವಾಗಲಿದೆ ಎಂದರು.

ಈ ಸಂದರ್ಭ ಮಾಜಿ ವಿಧಾನ ಪರಿಷತ್‌ನÀ ಸದಸ್ಯರುಗಳಾದ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯ ಕಾಂಗ್ರೆಸ್ ಅಧ್ಯಕ್ಷ ಕಾಳಮಂಡ ಬೇಬಿ, ಪ್ರಮುಖರಾದ ನರೇಂದ್ರ ಕಾಮತ್, ಕೋಟೆರ ಗಣೇಶ್, ಪೊನ್ನಣ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿ ಮುತ್ತಣ್ಣ, ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ, ವಕೀಲ ನರೇಂದ್ರ ಕಾಮತ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತೋರೇರ ಪೊನ್ನಕ್ಕ ಮತ್ತಿತರರು ಹಾಜರಿದ್ದರು.