ಪೊನ್ನಂಪೇಟೆ, ಮಾ. ೯: ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಪೊನ್ನಂಪೇಟೆ ಪಟ್ಟಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲ ಸಮಯ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು.

ಒಂಟಿ ಆನೆ ಪೊನ್ನಂಪೇಟೆ ನ್ಯಾಯಾಲಯದ ಮುಂಭಾಗದ ರಸ್ತೆಯ ಮೂಲಕ ಕುಂದ ರಸ್ತೆಗೆ ತೆರಳಿ, ಅರಣ್ಯ ಕಾಲೇಜಿನ ಸಮೀಪ ಇರುವ ಗದ್ದೆಯ ಮೂಲಕ, ಪೊನ್ನಂಪೇಟೆ ಎಪಿಸಿಎಂಎಸ್ ಆವರಣದೊಳಕ್ಕೆ ನುಗ್ಗಿದೆ. ಅಲ್ಲಿಂದ ಮುಖ್ಯ ರಸ್ತೆಯನ್ನು ದಾಟಿ ಚಿರಿಯಪ್ಪಂಡ ಉಮೇಶ್ ಉತ್ತಪ್ಪ ಅವರ ಮನೆಯ ಆವರಣದಲ್ಲಿ ಓಡಾಡಿ, ಮತ್ತೆ ಮುಖ್ಯ ರಸ್ತೆಯನ್ನು ದಾಟಿ ಎಪಿಸಿಎಂಎಸ್ ಆವರಣದ ಮೂಲಕ ಅರಣ್ಯ ಕಾಲೇಜು ಸಮೀಪದ ಗದ್ದೆಗೆ ತೆರಳಿ ಕುಂದ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಬಂದಿದೆ.

(ಮೊದಲ ಪುಟದಿಂದ) ಅಲ್ಲಿಂದ ಅಂಚೆ ಕಚೇರಿ ಸಮೀಪದ ತೋಟದ ಮೂಲಕ ಕಿರುಗೂರು ಗ್ರಾಮಕ್ಕೆ ತೆರಳಿ ಕಾಫಿ ತೋಟದೊಳಗೆ ನುಸುಳಿ ಕಿರುಗೂರು ಕುಟ್ಟಿ ಚಾತ ದೇವರ ಕಾಡಿನಲ್ಲಿ ಬೀಡು ಬಿಟ್ಟಿದೆ.

ಸುಮಾರು ೧೦ ರಿಂದ ೧೨ ವರ್ಷದೊಳಗಿನ ಗಂಡಾನೆ ಎಂದು ಅಂದಾಜಿಸಲಾಗಿದ್ದು, ಆನೆಗಳ ಗುಂಪಿನಿAದ ಬೇರ್ಪಟ್ಟು, ತಪ್ಪಿಸಿಕೊಂಡು ಬಂದಿರುವ ಕಾಡಾನೆ ಪಟ್ಟಣವನ್ನು ಪ್ರವೇಶಿಸಿದೆ. ನಂತರ ಗಾಬರಿಗೊಂಡು ಸಿಕ್ಕ ಸಿಕ್ಕ ಕಡೆ ಓಡಾಡಿದೆ. ಸಣ್ಣ ವಯಸ್ಸಿನ ಆನೆಯಾದ ಕಾರಣ ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ. ಪಟ್ಟಣದ ರಸ್ತೆಗಳಲ್ಲಿ ಆನೆ ಓಡಾಡುತ್ತಿರುವ ವಿಷಯ ತಿಳಿದ ನಾಗರಿಕರು ಸ್ವಲ್ಪ ಸಮಯ ಆತಂಕಕ್ಕೆ ಒಳಗಾಗಿದ್ದರು. ಆನೆ ಮುಖ್ಯ ರಸ್ತೆ ಮಧ್ಯೆ ಓಡಾಡುತ್ತಾ ಬೆಳಿಗ್ಗೆ ೬.೩೦ ರಿಂದ ೮ ಗಂಟೆವರೆಗೂ, ಒಂದೂವರೆ ಗಂಟೆ ಕಾಲ ಪಟ್ಟಣದಲ್ಲೇ ಸುತ್ತುವ ಮೂಲಕ ಆನೆ ಆತಂಕದ ಜೊತೆಗೆ ನೋಡುಗರಿಗೆ ಮನರಂಜನೆಯನ್ನೂ ಒದಗಿಸಿತು.

ಆನೆ ಕಾಡಿನಿಂದ ಪಟ್ಟಣ ಪ್ರವೇಶಿಸಿರುವ ಮಾಹಿತಿ ತಿಳಿದ ಎಸಿಎಫ್ ಗೋಪಾಲ್ ನೇತೃತ್ವದಲ್ಲಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್, ಉಪ ವಲಯ ಅರಣ್ಯಾಧಿಕಾರಿ ಕಿರಣ್, ಗಣೇಶ್, ಅರಣ್ಯ ರಕ್ಷಕ ಪ್ರಕಾಶ್ ಅಂಥೋನಿ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಕಿರುಗೂರು ದೇವರ ಕಾಡಿನಿಂದ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

- ಚನ್ನನಾಯಕ