ಗೋಣಿಕೊಪ್ಪಲು, ಮಾ. ೯: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯವನ್ನು ಜನತೆಗೆ ಒದಗಿಸಿದ್ದಾರೆ. ಪೊನ್ನಮ್ಮ ಸುಬ್ಬಯ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೇಸಿಗೆಯ ಮೂರು ತಿಂಗಳು ಪೊನ್ನಂಪೇಟೆಯ ೬ ವಾರ್ಡ್ಗಳಿಗೆ ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಇಲ್ಲಿಯ ಜನರ ನೀರಿನ ಬವಣೆಯನ್ನು ನಿವಾರಣೆ ಮಾಡಲು ಮುಂದಾಗಿದ್ದಾರೆ.

ಪೊನ್ನAಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಣ್ಣಿರ ಹರೀಶ್ ಮುಂದಾಳತ್ವದಲ್ಲಿ ಇತ್ತೀಚೆಗೆ ಶಾಸಕರನ್ನು ಭೇಟಿ ಮಾಡುವ ಮೂಲಕ ಮನವಿ ಸಲ್ಲಿಸಲಾಗಿತ್ತು. ಮನವಿಯ ಹಿನ್ನೆಲೆಯಲ್ಲಿ ಕೊಳವೆ ಬಾವಿಯ ಮೂಲಕ ನೀರನ್ನು ತೆಗೆಯುವ ಕಾರ್ಯಕ್ಕೆ ಶಾಸಕ ಪೊನ್ನಣ್ಣ ಅನುದಾನ ನೀಡಿದ್ದರು. ಆದರೆ ೫೦೦ ಅಡಿ ಅಳ ಕೊರೆದರೂ ನೀರು ಸಿಗದ ಹಿನ್ನೆಲೆಯಲ್ಲಿ ಇದೀಗ ಶಾಸಕರು ಜನರ ಕುಡಿಯುವ ನೀರಿನ ಬವಣೆ ನಿವಾರಿಸಲು ಸ್ವತಃ ಟ್ಯಾಂಕರನ್ನು ಒದಗಿಸಿದ್ದಾರೆ.

ಬೋರ್‌ವೇಲ್‌ನಿಂದ ಪ್ರತಿ ನಿತ್ಯ ನೀರನ್ನು ಟ್ಯಾಂಕರ್‌ಗೆ ನೀಡುವ ಜವಾಬ್ದಾರಿಯನ್ನು ಶಾಸಕ ಪೊನ್ನಣ್ಣ ಅವರು ಬಿ.ಶೆಟ್ಟಿಗೇರಿ ಭಾಗದ ಕಾಂಗ್ರೆಸ್ ಮುಖಂಡ ಕೊಲ್ಲೀರ ಬೋಪಣ್ಣನವರಿಗೆ ವಹಿಸಿದ್ದಾರೆ. ವೀರಾಜಪೇಟೆಯ ಶಾಸಕರ ಕಚೇರಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ಜನತೆಗೆ ಮುಟ್ಟಿಸುವ ಕಾರ್ಯಕ್ಕೆ ಪೊನ್ನಣ್ಣ ಚಾಲನೆ ನೀಡಿದರು.

ಪೊನ್ನಂಪೇಟೆ ಬಸವೇಶ್ವರ ದೇವಾಲಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್ ಮುಂದಾಳತ್ವದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕಾರ್ಯಕ್ಕೆ ಮುಂದಾದರು.

ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಅಲೀರ ರಶೀದ್, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಾಜಿ ಅಚ್ಚುತ್ತನ್, ಮುಂತಾದವರು ಶಾಸಕರ ಸಮಾಜಮುಖಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಈ ವೇಳೆ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಕೊಳೇರ ಭಾರತಿ, ಕರ್ತಮಾಡ ರಸಿಕ, ಜುನೈದ್, ಅಡ್ಡಂಡ ಸುನೀಲ್, ಸೇರಿದಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಂ.ಬಿ.ಅನೀಶ್, ಕಡೇಮಾಡ ಮುತ್ತಪ್ಪ, ಮುಂತಾದವರು ಉಪಸ್ಥಿತರಿದ್ದರು.