ಕರಿಕೆ, ಫೆ. ೨೯: ಇದೀಗ ತೀವ್ರವಾದ ಸುಡು ಬಿಸಿಲಿನ ತಾಪಕ್ಕೆ ಅವಧಿಗೂ ಮೊದಲೇ ನದಿ ತೊರೆಗಳೆಲ್ಲ ಬತ್ತಲಾರಂಭಿಸಿದ್ದು, ತಲಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ಹರಿಯುವ ಸಣ್ಣ ತೊರೆಗಳು ನೀರಿಲ್ಲದೆ ಒಣಗಲಾರಂಭಿಸಿವೆ.

ಮೀಸಲು ಅರಣ್ಯದಂಚಿನ ಹಳ್ಳಗಳೂ ಕೂಡ ಬತ್ತಿದ್ದು ಗ್ರಾಮದೊಳಗಿನ ನದಿ-ತೊರೆಗಳಲ್ಲಿ ಮರಳು, ಬಂಡೆಗಳು ಮಾತ್ರ ಗೋಚರಿಸುತ್ತಿದೆ. ಇದರಿಂದ ಮನುಷ್ಯರು ಮಾತ್ರವಲ್ಲದೆ ಜಲಚರ ವನ್ಯಜೀವಿಗಳು ಕೂಡ ನೀರಿಲ್ಲದೇ ಊರಿಗೆ ಲಗ್ಗೆ ಇಡಲಾರಂಭಿಸಿವೆ. ಕಾಡಿನೊಳಗಿನ ನೀರಿನ ಮೂಲ ಕಡಿಮೆಯಾದೊಡನೆ ಬೃಹತ್ ವನ್ಯಜೀವಿಗಳಾದ ಆನೆ, ಕಡವೆಗಳು ಇದೀಗ ಊರಿಗೆ ಲಗ್ಗೆ ಇಡಲಾರಂಭಿಸಿದ್ದು, ಕಾಡಂಚಿನ ಗ್ರಾಮ ವಾಸಿಗಳು ಇವುಗಳ ಉಪಟಳದಿಂದ ಕಂಗಾಲಾಗಿದ್ದಾರೆ. ರಾತ್ರಿಯಿಡೀ ಪಟಾಕಿ ಶಬ್ದವು ಗ್ರಾಮದೊಳಗೆ ಕೇಳಿಸುತ್ತಿವೆ. ಇನ್ನೂ ಕೆಲ ದಿನಗಳು ಮಳೆ ಬಾರದೆ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ತೀವ್ರ ಸ್ವರೂಪದ ಬರಗಾಲದ ಪರಿಸ್ಥಿತಿ ಕಾಡಲಿದ್ದು, ಒಂದು ಕಡೆ ತಲಕಾವೇರಿ ವನ್ಯದಾಮ, ಮತ್ತೊಂದು ಕಡೆ ಪಟ್ಟಿಘಾಟ್ ಮೀಸಲು ಅರಣ್ಯ, ಇನ್ನೊಂದೆಡೆಗೆ ಕೇರಳ ಅರಣ್ಯ ಇಲಾಖೆಯ ಗೇರು ತೋಪುಗಳು ಹಾಗೂ ಗುಡ್ಡಗಾಡಿನಿಂದ ಆವರಿಸಿರುವ ಕರಿಕೆ ಗ್ರಾಮದ ಜನರು, ಸಾಕು ಪ್ರಾಣಿಗಳು ಹಾಗೂ ಇಲ್ಲಿನ ವನ್ಯಜೀವಿಗಳು ಕುಡಿಯುವ ನೀರಿಲ್ಲದೇ ಪರದಾಡುವ ದಿನ ದೂರವಿಲ್ಲ. - ಸುಧೀರ್ ಹೊದ್ದೆಟ್ಟಿ