ಭಾಗಮಂಡಲ, ಫೆ. ೨೯: ಮಳೆಗಾಲದಲ್ಲಿ ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಇದೀಗ ನೀರಿನ ಅಭಾವ ಕಾಡುತ್ತಿದೆ. ಕಾವೇರಿ ತವರಿನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಭಾಗಮಂಡಲ -ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಇದೀಗ ಜಲ ಮೂಲಗಳು ಬತ್ತುತ್ತಿವೆ. ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ.

ಕಾವೇರಿಯ ಮೂಲ ತಲಕಾವೇರಿಯಿಂದ ಹಿಡಿದು ಭಾಗಮಂಡಲ, ಕೋರಂಗಾಲ, ಪುಲಿಕೋಟು, ನಾಫೋಕ್ಲು ಸೇರಿದಂತೆ ಕಾವೇರಿ ನದಿ ಹರಿವಿನ ಉದ್ದಕ್ಕೂ ಜಲಮೂಲ ಕ್ಷೀಣಿಸಿದೆ. ಸದ್ಯ ಮಳೆ ಸುರಿಯದಿದ್ದಲ್ಲಿ ಗ್ರಾಮೀಣ ಪ್ರದೇಶಗಳು ಕೂಡ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬಿಸಿಲಿನ ತಾಪಮಾನಕ್ಕೆ ಜೀವನದಿ ಕಾವೇರಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವಿನ ಪ್ರಮಾಣ ಕ್ಷೀಣಿಸುತ್ತಿದೆ. ಮಾನವ ಮತ್ತು ಜೀವ ಸಂಕುಲಕ್ಕೆ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಕಾಡಲಿದೆ.

ತಾಪಮಾನ ಹೆಚ್ಚಿರುವುದರಿಂದ ಕಾಫಿ ತೋಟಗಳಲ್ಲಿ ಗಿಡಗಳು ಬಾಡುತ್ತಿವೆ, ಕಾಳುಮೆಣಸಿನ ಬಳ್ಳಿಗಳು ಕೂಡ ಒಣಗುವ ಸನ್ನಿವೇಶ ಎದುರಾಗಿದೆ. ನೀರಿನ ಅನುಕೂಲ ಉಳ್ಳವರು ತುಂತುರು ನೀರಾವರಿ ವ್ಯವಸ್ಥೆ ಮೂಲಕ ತೋಟಕ್ಕೆ ನೀರು ಹಾಯಿಸಿ ಕಾಫಿಯ ಇಳುವರಿ ನಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಮಳೆಯನ್ನೇ ನಂಬಿದ್ದು, ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾಫಿ ಇಳುವರಿ ಲಭಿಸಲಿದೆ.

ಇದೀಗ ನೀರಿನ ಸೌಕರ್ಯ ಉಳ್ಳವರು ಅಲ್ಲಲ್ಲಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಈ ಹಿಂದಿನ ವರ್ಷಗಳಂತೆ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸುತ್ತಿಲ್ಲ ನೀರಿನ ಹರಿವು ಕ್ಷೀಣಿಸಿದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇರುವ ನೀರನ್ನೇ ಬಳಸಿಕೊಂಡು ತೋಟಗಳಿಗೆ ನೀರು ಹಾಯಿಸಬೇಕಾಗಿದೆ ಎಂದು ಬೆಳೆಗಾರರು ಆತಂಕ ವ್ಯಕ್ತ ಪಡಿಸುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮ ಪವಿತ್ರ ತಾಣವು ಹೌದು.. ಜಲ ಸಂರಕ್ಷಣೆಯ ಸ್ಥಳವು ಹೌದು. ಇಲ್ಲಿ ನೀರು ಶೇಖರಣೆಗೊಂಡರೆ ಮಾತ್ರ ಭಾಗಮಂಡಲ ವ್ಯಾಪ್ತಿಯ ಬಾವಿಗಳಲ್ಲಿ ನೀರಿನ ಶೇಖರಣೆ ಇರುತ್ತದೆ. ಇದೀಗ ತ್ರಿವೇಣಿ ಸಂಗಮದಲ್ಲಿ ಜಲ ಮೂಲ ಕ್ಷೀಣಗೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ. ಕಾವೇರಿಯ ಮೂಲದಲ್ಲಿ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯ ಶಿರಕಜೆ ನಾಗೇಶ್ ಪ್ರತಿಕ್ರಿಯಿಸಿ ಎರಡು ದಿನಗಳಿಂದ ಭಾಗಮಂಡಲ ಪಟ್ಟಣಕ್ಕೆ ನೀರಿನ ಕೊರತೆ ಉಂಟಾಗಿದೆ.

ಗ್ರಾಮ ಪಂಚಾ ಯಿತಿ ವತಿಯಿಂದ ಹೊಸ ದಾಗಿ ತೆಗೆಸಿದ ಕೊಳವೆ ಬಾವಿಯಲ್ಲಿ ನೀರಿಲ್ಲ. ಖಾಸಗಿ ಸ್ಥಳದಲ್ಲಿ ನಿರ್ಮಿಸ ಲಾಗಿದ್ದು, ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಅರಣ್ಯ ಇಲಾಖೆ ಇದಕ್ಕೆ ಅಡ್ಡಿಪಡಿಸಿ ರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ.

ಕಳೆದ ಎರಡು ವರ್ಷಗಳಿಂದ ಕಾವೇರಿ ಮೂಲದಲ್ಲಿ ಮಳೆಯ ಕೊರತೆ ಉಂಟಾಗಿದೆ ವಾರ್ಷಿಕ ೧೧೫ ಇಂಚು ಮಳೆ ಕಡಿಮೆಯಾಗಿದೆ. ಹೊಸದಾಗಿ ಪೈಪೈಲ್ಲೈನ್ ಜೋಡಿಸಿ ನೀರು ಪೂರೈಸದಿದ್ದಲ್ಲಿ ಭಾಗಮಂಡಲ ಪಟ್ಟಣದ ಜನತೆ ತೀವ್ರ ಸಮಸ್ಯೆಯನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.

-ಸುನಿಲ್