ಮಡಿಕೇರಿ, ಫೆ. ೨೮: ಮಡಿಕೇರಿ ನಗರದ ಅಭಿವೃದ್ಧಿಗೆ ಸಂಬAಧಿಸಿದAತೆ ಆಯವ್ಯಯ ರೂಪಿಸುವ ಸಂಬAಧ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯುವ ಸಲುವಾಗಿ ನಗರಸಭೆ ವತಿಯಿಂದ ಸಭೆ ಏರ್ಪಡಿಸಲಾಗಿತ್ತು. ಆದರೆ, ಅಚ್ಚರಿ ಎಂಬAತೆ ನಗರದ ವಿವಿಧ ವಾರ್ಡ್ಗಳನ್ನು ಪ್ರತಿನಿಧಿಸುವ, ನಗರದ ಅಭಿವೃದ್ಧಿಯ ಜವಾಬ್ದಾರಿಯ ಹೊಣೆಗಾರಿಕೆ ಹೊಂದಿರುವ ನಗರಸಭಾ ಸದಸ್ಯರುಗಳೇ ಸಭೆಗೆ ಗೈರು ಹಾಜರಾಗಿದ್ದರು. ಇನ್ನೂ ಸಲಹೆ ಸೂಚನೆ ನೀಡಲು ನಾಗರಿಕರ ಪರವಾಗಿ ಹಾಜರಾಗಿದ್ದವರು ಕೇವಲ ಆರು ಮಂದಿ ಮಾತ್ರ. ಪ್ರಮುಖ ಸಭೆಗೆ ಸಾಕ್ಷಿಯಾಗಿ ಮಾಧ್ಯಮ ಪ್ರತಿನಿಧಿಗಳೇ ಹೆಚ್ಚಾಗಿದ್ದರು..!
ಮಡಿಕೇರಿ ನಗರದ ಅಭಿವೃದ್ಧಿಗೆ ಆಯವ್ಯಯ ರೂಪಿಸಲು ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಇಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಭೆ ಏರ್ಪಡಿಸಲಾಗಿತ್ತು. ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅಧ್ಯಕ್ಷರೂ ಸೇರಿದಂತೆ ಕೇವಲ ಏಳು ಮಂದಿ ಸದಸ್ಯರುಗಳು ಮಾತ್ರ ಹಾಜರಾಗಿದ್ದರು. ಒಟ್ಟು ೨೩ ಸದಸ್ಯ ಬಲವಿರುವ ನಗರಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದವರೇ ೧೬ ಮಂದಿ ಸದಸ್ಯರುಗಳಿದ್ದರೂ ಏಳು ಮಂದಿ ಮಾತ್ರ ಬಂದಿದ್ದರು. ಇನ್ನೂ ವಿಪಕ್ಷ ಎಸ್‌ಡಿಪಿಐನ ಐವರು ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಈರ್ವರು ಸದಸ್ಯರೂ ಗೈರು ಹಾಜರಾಗಿದ್ದರು.
ಇನ್ನೂ ಸಭೆಯಲ್ಲಿ ಸಲಹೆ ನೀಡಲೆಂದು ನಾಗರಿಕರ ಪರವಾಗಿ ಕೇವಲ ಆರು ಮಂದಿ ಮಾತ್ರ ಆಗಮಿಸಿದ್ದರು. ವಿದ್ಯುತ್ ಬೆಳಕು, ಮೈಕ್ ವ್ಯವಸ್ಥೆ ಇಲ್ಲದೆ ಕತ್ತಲ ಕೂಪದಲ್ಲಿ ನಡೆದ ಸಭೆಯಲ್ಲಿ ಎಲ್ಲರಿಗಿಂತ
(ಮೊದಲ ಪುಟದಿಂದ) ಹೆಚ್ಚಿನ ಸಂಖ್ಯೆಯಲ್ಲಿದ್ದ (ಹದಿಮೂರು ಮಂದಿ) ಮಾಧ್ಯಮ ಪ್ರತಿನಿಧಿಗಳೇ ಸಲಹೆಗಳೊಂದಿಗೆ ಪ್ರಶ್ನೆ ಮಾಡುವ ಅನಿವಾರ್ಯ ಸನ್ನಿವೇಶ ಎದುರಾಗಿತ್ತು..!
ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ..!
ಸದಸ್ಯರುಗಳೇ ಇಲ್ಲದೆ, ಸಾರ್ವಜನಿಕರೂ ಇಲ್ಲದೆ ಕಾಟಾಚಾರಕ್ಕಾಗಿ ಸಭೆ ನಡೆಸುತ್ತಿರುವಿರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಅಧ್ಯಕ್ಷರು ಎಲ್ಲರಿಗೂ ಮಾಹಿತಿ ನೀಡಿದ್ದೇವೆ, ಆದರೂ ಯಾರೂ ಕೂಡ ಬಂದಿಲ್ಲವೆAದು ಹೇಳಿದರು. ಅಧ್ಯಕ್ಷರ ಪರವಾಗಿ ಮಾತನಾಡಿದ ಸದಸ್ಯ ಅರುಣ್ ಶೆಟ್ಟಿ, ಎಲ್ಲರಿಗೂ ಸೂಚನಾ ಪತ್ರ ಕಳುಹಿಸಲಾಗಿದೆ. ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿದೆ. ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವುದರಿಂದ ನಾವುಗಳು ಬಂದಿದ್ದೇವೆ. ಕಾಳಜಿ ಇಲ್ಲದವರು ಬಂದಿಲ್ಲ. ಜನರಿಗೂ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ರಸ್ತೆ-ಚರಂಡಿ-ಪಾರ್ಕಿAಗ್
ಸಭೆಯಲ್ಲಿ ಹಾಜರಿದ್ದ ಹಿರಿಯ ನಾಗರಿಕರಾದ ಬೈ.ಶ್ರೀ. ಪ್ರಕಾಶ್ ಮಾತನಾಡಿ, ನಗರದ ರಸ್ತೆಗಳು ತೀರಾ ಹಾಳಾಗಿದ್ದು, ನಡೆದಾಡಲೂ ಕೂಡ ಸಾಧ್ಯವಿಲ್ಲದಂತಾಗಿದೆ. ಚರಂಡಿಗಳು ಕೂಡ ಸಮರ್ಪಕವಾಗಿಲ್ಲ. ನಗರೋತ್ಥಾನ ಯೋಜನೆಯಡಿ ಶೀಘ್ರ ಕಾಮಗಾರಿ ಕೈಗೊಳ್ಳಬೇಕು. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ಜಾಗ ಒದಗಿಸಿಕೊಡಬೇಕೆಂದು ಸಲಹೆ ಮಾಡಿದರು.
ಸದಸ್ಯ ಅರುಣ್ ಶೆಟ್ಟಿ ಮಾತನಾಡಿ; ಮಡಿಕೇರಿ ರಸ್ತೆ ತೀರಾ ಹಾಳಾಗಿದೆ. ಇನ್ನು ಮಳೆಗಾಲ ಆರಂಭವಾಗಲಿದ್ದು, ಆದಷ್ಟು ಶೀಘ್ರವೇ ರಸ್ತೆ ಸರಿಪಡಿಸಬೇಕು. ರಸ್ತೆಗೆ ಪ್ರತ್ಯೇಕ ಬಜೆಟ್ ನಿಗದಿಪಡಿಸಬೇಕು, ಉತ್ತಮ ಬಜೆಟ್ ಮಂಡಿಸಬೇಕೆAದು ಸಲಹೆ ಮಾಡಿದರು.
ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ; ನಗರದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಬೆಳಿಗ್ಗೆಯೇ ವಾಹನ ನಿಲ್ಲಿಸಿ ತೆರಳುತ್ತಾರೆ. ಸರಿಯಾದ ವ್ಯವಸ್ಥೆ ಮಾಡಬೇಕು. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಎರಡು ಮೂರು ಸಭೆಗಳಲ್ಲಿ ಗಮನಕ್ಕೆ ತಂದಿದ್ದರೂ ಯಾವದೇ ಕ್ರಮ ಕೈಗೊಳ್ಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದರು.
ಉದ್ಯಮಿ ಜಗದೀಶ್ ಮಾತನಾಡಿ; ಕೊಹಿನೂರು ರಸ್ತೆಯ ಜಂಕ್ಷನ್‌ನಲ್ಲಿರುವ ರಾಜ ಕಾಲುವೆಗೆ ನಿತ್ಯ ಕಸ ಸುರಿಯುತ್ತಾರೆ. ರಸ್ತೆ ಬದಿಯಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸಿ ಹೋಗಿದ್ದು, ಇನ್ನೂ ಕೂಡ ತೆರವುಗೊಳಿಸಿಲ್ಲ, ಈ ಬಗ್ಗೆ ಶಕ್ತಿ ಪತ್ರಿಕೆಯಲ್ಲಿಯೂ ವರದಿ ಬಂದಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.
ನಗರ ಚೇಂಬರ್ ಅಧ್ಯಕ್ಷ ಸಂತೋಷ್ ಅಣ್ವೇಕರ್ ಮಾತನಾಡಿ; ಕಾಲೇಜು ರಸ್ತೆಯಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡುವಂತೆ ಕಳೆದ ಮೂರು ನಾಲ್ಕು ಸಭೆಗಳಲ್ಲಿಯೂ ಮನವಿ ಮಾಡಲಾಗಿದೆ. ಆದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಅಲ್ಲದೆ ಕೆಲವು ಅಂಗಡಿಗಳಲ್ಲಿ ವ್ಯಾಪಾರಿಗಳು ಸಾಮಗ್ರಿಗಳನ್ನು ಪಾದಚಾರಿ ರಸ್ತೆ(ಫುಟ್ ಪಾತ್)ಮೇಲೆ ಇರಿಸಿಕೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ನಡೆದಾಡಲು ಸಾಧ್ಯವಾಗದೆ ರಸ್ತೆ ಮೇಲೆ ನಡೆಯುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಅಲ್ಲದೆ, ವಿದ್ಯುತ್ ಕಂಬಗಳು ಕೂಡ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು. ಕಾಲೇಜು ರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ವಾಹನಗಳನ್ನು ನಿಲುಗಡೆ ಗೊಳಿಸುತ್ತಿದ್ದು, ಇದಕ್ಕೆ ಶುಲ್ಕ ವಿಧಿಸಬೇಕೆಂದು ಸಲಹೆ ಮಾಡಿದರು.
ಫಿ.ಮಾ.ಕಾರ್ಯಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮುನೀರ್ ಮಾಚಾರ್ ಮಾತನಾಡಿ; ನಗರದಲ್ಲಿ ಬೀಡಾಡಿ ದನಗಳ ಹಾವಳಿ ಜಾಸ್ತಿಯಾಗಿದ್ದು, ಗದ್ದುಗೆ ಬಳಿ ಇರುವ ದೊಡ್ಡಿಯನ್ನು ದುರಸ್ತಿಪಡಿಸಿದರೆ ಅಲ್ಲಿಗೆ ಸಾಗಿಸಬಹುದು. ಅಲ್ಲದೆ ಹಳೆ ಖಾಸಗಿ ನಿಲ್ದಾಣದ ಬಳಿಯ ತೋಡಿಗೆ ಅಂಗಡಿ ಹಾಗೂ ಹೊಟೇಲ್‌ಗಳ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಮಳೆಗಾಲದಲ್ಲಿ ನೀರು ಕಟ್ಟಿಕೊಳ್ಳುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.
ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ ಮಾತನಾಡಿ, ನಗರದಲ್ಲಿ ತಲೆ ಎತ್ತಿರುವ ತಾತ್ಕಾಲಿಕ ಮಳಿಗೆ ತೆರವುಗೊಳಿಸುವಂತೆ ದೂರು ನೀಡಿ ಮೂರು ತಿಂಗಳಾದರೂ ಯಾವದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಲಹೆಗಳನ್ನು ಆಲಿಸಿದ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರತಿಕ್ರಿಯಿಸಿ; ರಾಜಾಸೀಟ್ ಬಳಿ ಪಾರ್ಕಿಂಗ್‌ಗೆ ಟೆಂಡರ್ ನೀಡಲಾಗಿದೆ. ಚಿಕ್ಕಪೇಟೆಯಲ್ಲಿ ಜಾಗದ ಸಮಸ್ಯೆಯಿಂದಾಗಿ ವ್ಯವಸ್ಥೆ ಮಾಡಲಾಗುತ್ತಿಲ್ಲ. ಮುಖ್ಯ ರಸ್ತೆಗಳಲ್ಲಿ ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ ಬೀದಿ ನಾಯಿಗಳ ಸಂತಾನ ಹರಣ ಮಾಡಲು ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ, ರಾಜ ಕಾಲುವೆಗಳನ್ನು ಸ್ವಚ್ಛ ಮಾಡಲಾಗಿದ್ದು, ಈ ಬಗ್ಗೆ ಪರಿಶೀಲನೆ ಮಾಡುತ್ತಿರುತ್ತೇವೆ. ಯಾರಾದರೂ ಕಸ ಸುರಿಯುವದು ಕಂಡು ಬಂದಲ್ಲಿ ಫೋಟೋ ತೆಗೆದು ಕಳುಹಿಸಿಕೊಟ್ಟರೆ ದಂಡ ವಿಧಿಸಲಾಗುವದು. ಫುಟ್ ಪಾತ್‌ನಲ್ಲಿ ಸಾಮಗ್ರಿಗಳನ್ನು ಇರಿಸಿಕೊಳ್ಳುವವರಿಗೆ ನೋಟೀಸ್ ಕಳುಹಿಸಲಾಗುವದು. ಮೂರ್ನಾಡು ರಸ್ತೆಯ ಶೌಚಾಲಯ ನಿರ್ಮಾಣಕ್ಕೆ ಹಣ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳಾದ ಸಬಿತಾ, ಶ್ವೇತಾ, ಚಿತ್ರಾವತಿ, ಚಂದ್ರಶೇಖರ್, ಚಿತ್ರಾವತಿ, ಪೌರಾಯುಕ್ತ ವಿಜಯ್, ಪರಿಸರ ಅಭಿಯಂತರೆ ಸೌಮ್ಯ, ಅಧಿಕಾರಿ ತಾಹಿರ್ ಇದ್ದರು.