ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಫೆ. ೨೮: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೈಟೆಕ್ ಬಸ್ ನಿಲ್ದಾಣದ ಕನಸು ಭಗ್ನಗೊಂಡು ಹಲವು ವರ್ಷಗಳೇ ಕಳೆದಿವೆ. ೨೦೨೩ ಇಸವಿಯ ಮಾರ್ಚ್ ತಿಂಗಳಿನಲ್ಲಿ ಸರ್ಕಾರದಿಂದ ಬಸ್ ನಿಲ್ದಾಣಕ್ಕೆ ಬಿಡುಗಡೆಯಾಗಿದ್ದ ೧ ಕೋಟಿ ಅನುದಾನವು ಸರ್ಕಾರ ಬದಲಾಗುತ್ತಿದ್ದಂತೆಯೇ ವಾಪಸ್ಸಾಗಿತ್ತು. ಇದರಿಂದಾಗಿ ಸಹಜವಾಗಿಯೇ ನೂತನ ಬಸ್ ನಿಲ್ದಾಣದ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ ಬಹುದೊಡ್ಡ ನಿರಾಸೆಯಾಗಿತ್ತು.
ಇದೀಗ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಗೋಣಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಒದಗಿಸುವ ಮೂಲಕ ೨ ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಲು ತಾ.೨೯ (ಇಂದು) ಮುಹೂರ್ತ ನಿಗದಿಪಡಿಸಿದ್ದಾರೆ ಇದರಿಂದಾಗಿ ಕಳೆದ ಒಂದು ದಶಕಗಳಿಂದ ಉತ್ತಮ ಬಸ್ ನಿಲ್ದಾಣವಿಲ್ಲದೆ ತೊಂದರೆಯಲ್ಲಿದ್ದ ನಾಗರಿಕರಿಗೆ ಹಾಗೂ ಪ್ರಯಾಣಿಕರಿಗೆ ಕೆಲವೇ ತಿಂಗಳುಗಳಲ್ಲಿ ಉತ್ತಮ ಬಸ್ ನಿಲ್ದಾಣದ ಸೇವೆ ಲಭ್ಯವಾಗಲಿದೆ.
ಶಾಸಕ ಎ.ಎಸ್. ಪೊನ್ನಣ್ಣ ತಮ್ಮ ಚುನಾವಣಾ ಸಂದರ್ಭ ಗೋಣಿಕೊಪ್ಪ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ವೀರಾಜಪೇಟೆ ನಗರಕ್ಕೆ ಆಗಮಿಸಿದ್ದ ವೇಳೆ ಬಸ್ ನಿಲ್ದಾಣಕ್ಕೆ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿದ್ದರು. ಇದರಿಂದಾಗಿ ಗೋಣಿಕೊಪ್ಪ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಭೂಮಿ ಪೂಜೆಗೆ ದಿನಾಂಕ ನಿಗದಿಯಾಗಿದೆ.
ಕಳೆದ ೧೦ ವರ್ಷಗಳ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕುಲ್ಲೇಟಿರ ಪ್ರವಿಮೊಣ್ಣಪ್ಪ ಅವಧಿಯಲ್ಲಿ ಬಸ್ ನಿಲ್ದಾಣದ ಒಂದು ಭಾಗ ಮಳೆಯಿಂದ ಮುರಿದು ಬಿದ್ದಿತ್ತು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲು ತೀರ್ಮಾನವನ್ನು ಗ್ರಾಮ ಪಂಚಾಯಿತಿ ಕೈಗೆತ್ತಿಕೊಂಡಿತ್ತು. ಅದರಂತೆಯೇ ನಿಲ್ದಾಣವನ್ನು ಒಡೆದು ಹಾಕಲಾಗಿತ್ತು. ನಂತರ ತಾತ್ಕಾಲಿಕವಾಗಿ ತಂಗುದಾಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಅಂದಿನ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಗೋಣಿಕೊಪ್ಪ ಬಸ್ ನಿಲ್ದಾಣದ ಅಭಿವೃದ್ಧಿಗಾಗಿ
(ಮೊದಲ ಪುಟದಿಂದ) ಅನುದಾನ ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಸುತ್ತಲೂ ಸರ್ವೆಕಾರ್ಯ ನಡೆಸಲಾಗಿತ್ತು. ಸುಮಾರು ೬ ಕೋಟಿ ವೆಚ್ಚದ ಬಸ್ ನಿಲ್ದಾಣದ ಯೋಜನೆಯನ್ನು ಸಿದ್ದಪಡಿಸಿ, ನೀಲನಕ್ಷೆಯನ್ನು ತಯಾರು ಮಾಡಲಾಗಿತ್ತು. ನೂತನ ಬಸ್ ನಿಲ್ದಾಣಕ್ಕೆ ೨೦೨೩ರ ಮಾರ್ಚ್ ತಿಂಗಳಿನಲ್ಲಿ ಆಗಿನ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ತದನಂತರ ಕಾರಣಾಂತರಗಳಿAದಾಗಿ ಗೋಣಿಕೊಪ್ಪ ಬಸ್ ನಿಲ್ದಾಣ ಅಭಿವೃದ್ಧಿ ಮಾಡಲು ಸಾಧ್ಯವಾಗಲೇ ಇಲ್ಲ.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಎಸ್. ಪೊನ್ನಣ್ಣ ಗೆಲುವು ಸಾಧಿಸಿದರು. ಗೆಲುವಿನ ನಂತರ ಗೋಣಿಕೊಪ್ಪ ಪಂಚಾಯಿತಿಗೆ ಆಗಮಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಿದ್ದರು. ಈ ವೇಳೆ ಬಸ್ ನಿಲ್ದಾಣದ ನೈಜ ಸ್ಥಿತಿಯನ್ನು ಪರಿಶೀಲಿಸಿದ್ದರು. ಚುನಾವಣಾ ಸಂದರ್ಭ ನೀಡಿದ ಆಶ್ವಾಸನೆಯಂತೆ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹಾಗೂ ಇದಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತರುವುದಾಗಿ ಭರವಸೆ ನೀಡಿದ್ದರು.ಪುರಸಭೆ ಇದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ವೇಳೆ ನೂತನ ಬಸ್ ನಿಲ್ದಾಣ, ತಂಗುದಾಣ ಹಾಗೂ ಶೌಚಾಲಯವನ್ನು ೧೯೭೦ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯಲ್ಲಿಯೇ ಮಾದರಿ ಬಸ್ ನಿಲ್ದಾಣ ಎಂಬ ಹೆಸರು ಗಳಿಸಿತ್ತು. ಬಸ್ ನಿಲ್ದಾಣ ೪೫ ವರ್ಷಗಳಿಗೂ ಅಧಿಕ ಸಮಯದವರೆಗೂ ಗಟ್ಟಿಮುಟ್ಟಾಗಿತ್ತು. ಮಳೆಗಾಲ ಸಂದರ್ಭ ನಿಲ್ದಾಣದ ಮುಂಭಾಗ ಕೊಂಚ ಕುಸಿದು ಬಿದ್ದಿತ್ತು. ಕೂಡಲೇ ಹಳೆಯದಾದ ಕಟ್ಟಡವನ್ನು ಕೆಡವಲು ರಾತೋರಾತ್ರಿ ಕ್ರಮ ಕೈಗೊಳ್ಳಲಾಯಿತು. ಆದರೆ ಕೆಡವಿದ ವೇಗದಲ್ಲಿ ಹೊಸ ಬಸ್ ನಿಲ್ದಾಣದ ಕನಸ್ಸು ಇಂದಿಗೂ ನನಸಾಗಲಿಲ್ಲ. ಇದೀಗ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ.