ಶನಿವಾರಸಂತೆ, ಫೆ. ೨೭: ಹಲವಾರು ವರ್ಷಗಳಿಂದ ನೀರು ಬತ್ತಿ ಹೋಗಿ, ಹೂಳು ತುಂಬಿ, ಆಳೆತ್ತರಕ್ಕೆ ಬೆಳೆದು ನಿಂತಿರುವ ಕಾಡುಗಿಡ, ಕಳೆಸಸ್ಯಗಳಿಂದ ವಿನಾಶದ ಅಂಚಿಗೆ ಜಾರುತ್ತಾ ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಪುರಾತನ ಮಕ್ಕಳ ಕಟ್ಟೆ ಕೆರೆ ಚಾತಕ ಪಕ್ಷಿಯಂತೆ ಕಾಯುತ್ತಾ ಕಾಯಕಲ್ಪದ ನಿರೀಕ್ಷೆಯಲ್ಲಿದೆ.
ಪುರಾತನ ಮಕ್ಕಳ ಕಟ್ಟೆ ಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಪುನಶ್ಚೇತನಗೊಳ್ಳಲಿದೆ ಎಂಬ ೩ ವರ್ಷಗಳ ಹಿಂದಿನ ಹೇಳಿಕೆ ಹುಸಿಯಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದೆ.
ಕೆರೆಯನ್ನು ಹಿಂದೆ ಮಕ್ಕಳ ಕಟ್ಟೆ ಕೆರೆ ಎಂದು ಕರೆಯುತ್ತಿದ್ದರು. ಆನಂತರದ ದಿನಗಳಲ್ಲಿ ಕೆರೆಯ ಹೆಸರು ಬದಲಾಯಿತು.ಅಂದಿನ ಪುರಸಭಾ ಅಧ್ಯಕ್ಷ ಹಾಗೂ ಸಮಾಜಸೇವಕ ದಿವಂಗತ ಬಿ. ಗಂಗಪ್ಪ ಕರ್ಕೇರ ಅವರ ಮನೆಯ ಪಕ್ಕ ಕಾವೇರಿ ರಸ್ತೆಗೆ ಹೊಂದಿ ಕೊಂಡAತೆ ಈ ಕೆರೆ ಇದ್ದುದರಿಂದ ಜನರು ಕೆರೆಯನ್ನು ಗಂಗಪ್ಪ ಮಾಸ್ಟರ್ ಕೆರೆ ಎಂದು ಕರೆಯಲಾರಂಭಿಸಿದರು. ಇಂದಿಗೂ ಊರ ಹಿರಿಯರ ಮಾತಲ್ಲಿ ಈ ಸಮಾಜ ಸೇವಕನ ಹೆಸರೇ ಉಳಿದುಕೊಂಡಿದೆ
ಅವರು ಅಧ್ಯಕ್ಷರಾಗಿದ್ದ ಅಷ್ಟೂ ಅವಧಿಯಲ್ಲಿ ಪ್ರತಿ ವರ್ಷ ಕೆರೆಯ ಹೂಳು ತೆಗೆಸಿ ಸ್ವಚ್ಛಗೊಳಿಸ ಲಾಗುತ್ತಿತ್ತು. ಈ ಕೆರೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದರೂ ಮಳೆಗಾಲದಲ್ಲಿ ತುಂಬಿ ತುಳುಕುತ್ತಿತ್ತು.ಮೀನುಗಳಿಗೆ, ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತಿತ್ತು. ದನಕರುಗಳ ದಾಹ ಇಂಗಿಸುತ್ತಿತ್ತು. ಯಾವುದೇ ಕಟ್ಟಡ ಅಥವಾ ಮನೆ ಕಟ್ಟುವವರಿಗೆ, ಇಟ್ಟಿಗೆ ಮಾಡುವವರಿಗೆ ಸಾಕಷ್ಟು ನೀರು ಒದಗಿಸುತ್ತಿತ್ತು.
೧೯೮೩ ರವರೆಗೆ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಈ ಕೆರೆ ಏರಿಯನ್ನು ಹೊಂದಿ ಸುಸ್ಥಿತಿಯಲ್ಲಿ ಇತ್ತು.ಏರಿಯ ಮೇಲೆ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಅನಂತರದ ದಿನಗಳಿಂದ ಈ ಕೆರೆ ವಿನಾಶದ ಅಂಚಿಗೆ ಬಂದಿತು.ಗಮನ ಹರಿಸುವವರಿಲ್ಲದೇ ಹೂಳು, ಕಸಕಡ್ಡಿ ತುಂಬಿ, ಬೇಡದ ಕಳೆ ಸಸ್ಯ ಬೆಳೆಯತೊಡಗಿದವು.೧೯೯೫ ರಿಂದ ಕೆರೆ ಕಸದ ಗುಂಡಿಯಾಗಿ ಪರಿವರ್ತಿತವಾಯಿತು.
ಚರಂಡಿಗಳಲ್ಲಿ ಹರಿದು ಬರುವ ಅರ್ಧ ಗ್ರಾಮದ ಕೊಳಚೆ ನೀರು, ಕಸಕಡ್ಡಿಯೆಲ್ಲವೂ ಕೆರೆ ಒಡಲನ್ನು ಸೇರುತ್ತಿತ್ತು. ಕೆಲ ಸಾರ್ವಜನಿಕರೂ ಕಸ-ಕೊಳಚೆಯನ್ನೆಲ್ಲಾ ತಂದು ಕೆರೆ ಬದಿಗೆ ಸುರಿಯುತ್ತಿದ್ದರು. ಪಟ್ಟಣದ ತ್ಯಾಜ್ಯ ರಾಶಿಯನ್ನು ತಂದು ಕೆರೆಗೆ ಸುರಿಯಲಾಗುತ್ತಿದೆ. ಹೊಸಮನೆ ನಿರ್ಮಾಣ, ದುರಸ್ತಿ, ತೋಟಗಾರಿಕೆ ಯಲ್ಲಿ ಹೆಚ್ಚಾದ ಮಣ್ಣನ್ನು ಟ್ರ್ಯಾಕ್ಟರ್ಗಳಲ್ಲಿ ತುಂಬಿ ತಂದು ಕೆರೆ ಬದಿಯಲ್ಲಿ ಸುರಿಯಲಾಗುತ್ತಿದೆ.
ಇವುಗಳ ಪರಿಣಾಮವೋ ಎಂಬAತೆ ಕೆರೆ ಒಡಲಲ್ಲಿ ಆಳೆತ್ತರದ ಕೆಸ, ಕಳೆ ಸಸ್ಯಗಳು ಬೆಳೆದು ನಿಂತವು. ಕೆರೆ ಎಂಬ ಕುರುಹು ಮಾಯವಾಯಿತು. ಕೆರೆ ಬಳಿಯೆ ಹಲವು ಕುಟುಂಬಗಳು ವಾಸವಾಗಿದ್ದು ಹಗಲು ರಾತ್ರಿ-ಮೂಗು ಮುಚ್ಚಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕೆರೆ ದುಸ್ಥಿತಿ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು ಪ್ರಸ್ತಾಪಿಸಿದರೂ ಪ್ರಯೋಜನವಾಗುತ್ತಿಲ್ಲ.
೨೦೨೧ ರಲ್ಲಿ ಗ್ರಾಮ ಪಂಚಾಯಿತಿ ಮಕ್ಕಳ ಕಟ್ಟೆ ಕೆರೆಗೆ ಕಾಯಕಲ್ಪ ನೀಡಿ, ಪುನಶ್ಚೇತನಗೊಳಿಸಲು ಕ್ರಮ ಕೈಗೊಂಡಿತ್ತು. ಕೆರೆಯ ಹೂಳು ತೆಗೆಸಿ, ಕಾಡುಗಿಡ, ಕಳೆ ಸಸ್ಯವನ್ನೆಲ್ಲಾ ತೆರವುಗೊಳಿಸಿ ಸ್ವಚ್ಛಗೊಳಿಸಿತ್ತು. ಪಂಚಾಯಿತಿ ಕ್ರಿಯಾ ಯೋಜನೆ ರೂಪಿಸಿದ್ದು ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಿದೆ.ಸುಮಾರು ೯೫ ಸೆಂಟ್ ವಿಸ್ತೀರ್ಣದ ಕೆರೆಯ ಹೂಳನ್ನು ಮತ್ತೊಮ್ಮೆ ತೆಗೆಸಿ, ಸುತ್ತಲು ಕಲ್ಲುಗಳನ್ನು ಅಳವಡಿಸಿ, ಏರಿ ನಿರ್ಮಿಸಲಾಗುವುದು. ಏರಿಯ ಮೇಲೆ ಉದ್ಯಾನ ನಿರ್ಮಿಸಿ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ತಿಳಿಸಿದ್ದರು. ಆದರೆ, ೨೦೨೩ ರಲ್ಲಿ ಅವರ ವರ್ಗಾವಣೆಯೊಂದಿಗೆ ಅವರ ಹೇಳಿಕೆಯೂ ಹೇಳಿಕೆಯಾಗಿಯೇ ಉಳಿದು ಹೋಯಿತು.
ಆದರೆ, ೩ ವರ್ಷ ಕಳೆದರೂ ಉದ್ಯಾನ ನಿರ್ಮಾಣವಾಗಲೇ ಇಲ್ಲ. ಕೆರೆ ಒಡಲಲ್ಲಿ ಮತ್ತೆ ಹೂಳು ತುಂಬಿದೆ. ಆಳೆತ್ತರ ಕಳೆ ಸಸ್ಯ ಬೆಳೆದು ನಿಂತಿದೆ. ವಾಯು ವಿಹಾರವಿರಲಿ, ರಸ್ತೆಯಲ್ಲಿ ವಾಕಿಂಗ್ ಹೋಗುವಾಗ ಮೂಗು ಮುಚ್ಚಿ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಂದರ ಹೂವುಗಳ ಬದಲು ಕಳೆಸಸ್ಯೋದ್ಯಾನ ನಿರ್ಮಾಣವಾಗಿದೆ ಎಂದು ವಾಕಿಂಗ್ ಹೋಗುವ ಕೆಲ ಹಿರಿಯ ನಾಗರಿಕರು ವ್ಯಂಗ್ಯವಾಡುತ್ತಿದ್ದಾರೆ.
ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸರ್ವ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಪಂಚಾಯಿತಿ ವ್ಯಾಪ್ತಿಯ ಈ ಏಕೈಕ ಕೆರೆಯನ್ನು ಪುನಶ್ಚೇತನಗೊಳಿಸಿ ಅಂತರ್ಜಲಮಟ್ಟವನ್ನು ಕಾಪಾಡಿ ಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ಕೆರೆ ಬದಿಯಲ್ಲಿ ಎಂದಿನAತೆ ಈಗಲೂ ಸಾರ್ವಜನಿಕರು ತ್ಯಾಜ್ಯ ಗಳನ್ನು ತಂದು ಸುರಿಯುತ್ತಿದ್ದಾರೆ. ಘಟಕದ ಸುತ್ತ ಶೀಘ್ರ ತಡೆಗೋಡೆ ನಿರ್ಮಾಣವಾದರೇ ಕೆರೆ ದಡದಲ್ಲಿ ಮಾತ್ರವಲ್ಲ; ಪಟ್ಟಣದ ದ್ವಾರದಲ್ಲಿ ಸ್ವಾಗತ ಫಲಕದ ಬಳಿ ಮುಖ್ಯ ರಸ್ತೆಯ ಬದಿಯಲ್ಲಿ ದುರ್ವಾಸನೆ ಬೀರುತ್ತಾ ಸ್ವಾಗತಿಸುವ ತ್ಯಾಜ್ಯ ರಾಶಿಯ ಸಮಸ್ಯೆಗೂ ಮುಕ್ತಿ ದೊರೆಯಲಿದೆ. ವಿನಾಶದ ಅಂಚಿನಲ್ಲಿರುವ ಕೆರೆಯ ಸ್ವಚ್ಛತೆಯಿಂದ ಅಂತರ್ಜಲ ಮಟ್ಟ ಕಾಪಾಡಿಕೊಳ್ಳಲಿ. ಊರಿನ ತ್ಯಾಜ್ಯವನ್ನು ಕೆರೆ ಬದಿ ಹಾಕದಂತೆ ವ್ಯವಸ್ಥೆ ರೂಪಿಸಲಿ. ಹಿರಿಯ ನಾಗರಿಕರ ವಾಯು ವಿಹಾರದ ಹಿತದೃಷ್ಟಿಯಿಂದ ಲಾದರೂ ಪಂಚಾಯಿತಿ ಏಕೈಕ ಪುರಾತನ ಕೆರೆಯ ಕಾಯ ಕಲ್ಪಕ್ಕೆ ಹೆಚ್ಚಿನ ಕಾಳಜಿ ವಹಿಸಲಿ. ಕೆರೆಯ ಏರಿಯ ಸ್ಥಳ ಬಿಟ್ಟರೇ ಗ್ರಾಮದಲ್ಲಿ ಉದ್ಯಾನ ನಿರ್ಮಾಣಕ್ಕೆ ಬೇರೆ ಜಾಗವೇ ಇಲ್ಲ ಎಂದು ಉದ್ಯಮಿ ಗಳಾದ ಡಿ.ಎಸ್. ಪ್ರಸನ್ನ, ಶ್ರೀನಿವಾಸ, ರಮೇಶ್ ಹಾಗೂ ಮುಖಂಡ ಆದಿಲ್ ಪಾಶ ಆಗ್ರಹಿಸಿದ್ದಾರೆ.
-ಶ.ಗ. ನಯನತಾರಾ, ಶನಿವಾರಸಂತೆ