ಮಡಿಕೇರಿ, ಫೆ. ೨೭: ವೀರಾಜಪೇಟೆ ವಿಭಾಗದ, ವೀರಾಜಪೇಟೆ ವಲಯದ, ವೀರಾಜಪೇಟೆ ಶಾಖೆ ಹಾಗೂ ಅಮ್ಮತ್ತಿ ಶಾಖೆಗೆ ಒಳಪಡುವ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಹಲವು ದಿನಗಳಿಂದ ಅಲ್ಲಿನ ಗ್ರಾಮಸ್ಥರ ಗದ್ದೆ ಹಾಗೂ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಷ್ಟ ಮಾಡುತ್ತಿರುವುದರಿಂದ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಮನವಿಯ ಮೇರೆಗೆ ಕುಕ್ಲೂರು, ಬೆಳ್ಳರಿಮಾಡು, ಕದನೂರು, ಪುದುಕೋಟೆ, ಐಮಂಗಲ, ಮಗ್ಗುಲ, ಬಿಟ್ಟಂಗಾಲ, ದೇವಣಗೇರಿ, ಚಂಬೆಬೆಳ್ಳೂರು, ಕಾವಾಡಿ, ಕಣ್ಣಂಗಾಲ, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೨೮ ಮತ್ತು ೨೯ ಹಾಗೂ ಮಾ.೧ ರಂದು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಬೇಕು. ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕು. ಕಾರ್ಯಾಚರಣೆ ವೇಳೆ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವೀರಾಜಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.