ಕುಶಾಲನಗರ, ಫೆ. ೨೭: ಜಿಲ್ಲೆ-ನೆರೆ ಜಿಲ್ಲೆಗಳ ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರಿಗೆ ಆಶ್ರಯವಾಗಿರುವ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಕಂಡು ಬಂದಿದೆ. ೮.೫ ಟಿ ಎಂ ಸಿ ಸಂಗ್ರಹ ಸಾಮರ್ಥ್ಯ ಹೊಂದಿ ರುವ ಹಾರಂಗಿ ಜಲಾಶಯದಲ್ಲಿ ಇದೀಗ ಕೇವಲ ೨.೬ ಟಿ ಎಂ ಸಿ ಪ್ರಮಾಣದ ನೀರಿನ ಸಂಗ್ರಹ ಕಾಣಬಹುದು. ವಾಡಿಕೆಯಂತೆ ವಾರ್ಷಿಕ ೩ ಬಾರಿ ಭರ್ತಿ ಆಗಬೇಕಾದ ಹಾರಂಗಿ ಜಲಾಶಯ ಈ ಬಾರಿಯ ಮಳೆಗಾಲದಲ್ಲಿ ಕೇವಲ ಒಂದು ಬಾರಿ ಮಾತ್ರ ಭರ್ತಿಯಾಗಿದ್ದು, ಒಟ್ಟು ೨೭.೧೪ ಟಿ ಎಂ ಸಿ ಪ್ರಮಾಣದ ನೀರು ಹರಿದು ಬಂದಿತ್ತು. ಇಂದಿನ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು ೩೯ ಟಿಎಂಸಿ ಪ್ರಮಾಣದ ನೀರು ಹರಿದು ಬಂದಿತ್ತು.
ಅAಕಿ ಅಂಶಗಳ ಪ್ರಕಾರ ಈ ಸಾಲಿನ ಮಳೆಗಾಲ ಅವಧಿಯಲ್ಲಿ ಜಲಾಶಯದಿಂದ ನದಿಗೆ ೧೮.೩ ಟಿಎಂಸಿ ಪ್ರಮಾಣದ ಹೆಚ್ಚುವರಿ ನೀರನ್ನು ಹರಿಸಲಾಗಿದ್ದು ಕೃಷಿ ಚಟುವಟಿಕೆಗೆ ಕಾಲುವೆ ಮೂಲಕ ೭.೩ ಟಿಎಂಸಿ ಪ್ರಮಾಣದ ನೀರನ್ನು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಹಾರಂಗಿ ಜಲಾಶಯದಿಂದ ಸಮೀಪದ ಗ್ರಾಮಗಳಿಗೆ ಸೇರಿದಂತೆ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಇದೀಗ ನದಿಗೆ ಜಲಾಶಯದಿಂದ ೨೦೦ ಕ್ಯುಸೆಕ್ಸ್ ಪ್ರಮಾಣದ ನೀರನ್ನು ಬಿಡಲಾಗಿದೆ. ಜಲಾಶಯಕ್ಕೆ ಜಲಾನಯನ ಪ್ರದೇಶದ ಜಲಮೂಲಗಳಿಂದ ಕೇವಲ ೧೯೫ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿರುವುದಾಗಿ ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಸಿದ್ದರಾಜು ಮಾಹಿತಿ ನೀಡಿದ್ದಾರೆ.
೨೮೫೯ ಅಡಿಗಳ ಗರಿಷ್ಠ ಪ್ರಮಾಣದ ಜಲಾಶಯದ ನೀರಿನ ಮಟ್ಟ ಇದೀಗ ೨೮೩೦.೮೭ ಅಡಿಗಳ ತಳಭಾಗಕ್ಕೆ ಇಳಿದಿದೆ. ಹಾರಂಗಿ ಜಲಾಶಯದ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಖಾಸಗಿ ಸಂಸ್ಥೆ ಪ್ರಸಕ್ತ ನೀರಿನ ಕೊರತೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದೆ. ಕಾಲುವೆ ಮೂಲಕ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದ್ದು ಪ್ರಸಕ್ತ ಕಾಲುವೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ವರದಿ -ವನಿತಾ ಚಂದ್ರಮೋಹನ್