ಕೂಡಿಗೆ, ಫೆ. ೨೭: ಹೆಬ್ಬಾಲೆ ಸಮೀಪದ ಕಾವೇರಿ ನದಿಯಿಂದ ನೀರನ್ನು ಜಾಕ್‌ವೆಲ್ ಮೂಲಕ ತೆಗೆದು ಬೃಹತ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ನಂತರ ಆ ನೀರನ್ನು ಶುದ್ಧೀಕರಣಗೊಳಿಸಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೨ ಗ್ರಾಮಗಳಿಗೆ ಹೆಬ್ಬಾಲೆಯಿಂದ ಗುಮ್ಮನಕೊಲ್ಲಿಯವರೆಗೆ ಮತ್ತು ಗಡಿಭಾಗ ಶಿರಂಗಾಲದವರೆಗೂ ಸರಬರಾಜು ಮಾಡುವ ವ್ಯವಸ್ಥೆ ಕಳೆದ ಕೆಲ ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಕಳೆದ ೧೦ ದಿನಗಳಿಂದ ಬಿಸಿಲಿನ ತಾಪಮಾನ ಏರಿಕೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ತೀರಾ ಕುಸಿತದಿಂದಾಗಿ ಜಾಕ್‌ವೆಲ್‌ನ ಮೋಟಾರ್ ಪಂಪ್‌ಗೆ ನದಿಯ ನೀರು ಸಿಗದಷ್ಟು ನೀರಿನ ಮಟ್ಟ ಇಳಿದಿರುವ ಕಾರಣ ಸಂಬAಧಿಸಿದ ಅಧಿಕಾರಿ ವರ್ಗದವರು ಕಾವೇರಿ ನದಿಯ ಮಧ್ಯಭಾಗದಿಂದ ಬದಲಿ ವ್ಯವಸ್ಥೆ ಮಾಡಿಕೊಂಡು ಕುಡಿಯುವ ನೀರಿನ ಸರಬರಾಜಿಗೆ ಮುಂದಾಗಿದ್ದಾರೆ.

ಸೋಮವಾರಪೇಟೆ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಅವರು ಈ ಸಂಬAಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕಾವೇರಿ ನದಿಯ ಮಧ್ಯ ಭಾಗದಿಂದ ಬೃಹತ್ ಗಾತ್ರದ ಪಂಪ್ ಮೂಲಕ ನೀರನ್ನು ನೇರವಾಗಿ ಎತ್ತಿ ನಂತರ ಪಂಪ್‌ಹೌಸ್ ಮೂಲಕ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಬೃಹತ್ ಪ್ರಮಾಣದ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ನೀರಿನ್ನು ಶುದ್ಧೀಕರಣ ಮಾಡಿ ನಂತರ ಹೆಬ್ಬಾಲೆಯಿಂದ ತೊರೆನೂರು, ಶಿರಂಗಾಲ ಗ್ರಾಮದವರೆಗೆ ಮತ್ತು ಹೆಬ್ಬಾಲೆಯಿಂದ ಕಣಿವೆ, ಹುಲುಸೆ, ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು ಗುಮ್ಮನಕೊಲ್ಲಿವರೆಗೆ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡಿ ಆಯಾ ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ಬೃಹತ್ ನೀರಿನ ಟ್ಯಾಂಕ್‌ಗಳಲ್ಲಿ ಸಂಗ್ರಹ ಮಾಡಿ ಗ್ರಾಮ ಪಂಚಾಯಿತಿ ನೀರು ಗಂಟಿಗಳ ಮುಖೇನ ಉಪ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೆ ಸಂಬAಧಿಸಿದ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವೀರೇಂದ್ರ ಅವರು ಮಾಹಿತಿ ನೀಡಿದ್ದಾರೆ. - ಕೆ.ಕೆ ನಾಗರಾಜಶೆಟ್ಟಿ