ಶನಿವಾರಸಂತೆ, ಫೆ. ೨೬: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ವಲಯ ಅರಣ್ಯ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಕಲಾವಿದರ ತಂಡದವರು “ಅರಣ್ಯ ಮತ್ತು ವನ್ಯ ಪ್ರಾಣಿಗಳನ್ನು ಬೆಂಕಿಯಿAದ ರಕ್ಷಿಸಿ’ ಎಂಬ ಬೀದಿ ನಾಟಕ ಪ್ರದರ್ಶಿಸಿದರು.

ಪತ್ರಕರ್ತ ಪ್ರಕಾಶ್‌ಚಂದ್ರ ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಕಲಾ ವೇದಿಕೆ ತಂಡದ ಅಧ್ಯಕ್ಷ ಈ.ರಾಜು ಸದಸ್ಯರಾದ ಚಂದ್ರಪ್ಪ, ಶಿವಕುಮಾರ್, ಗೌರಮ್ಮ, ಗಿರಿಜಮ್ಮ, ಶ್ರೀಧರ್ ಹಾಗೂ ಸೋಮಳ್ಳಿ ಶಿವು ಅರಣ್ಯ ಜಾಗೃತಿ ಗೀತೆಗಳನ್ನು ಹಾಡಿದರು. ನಾಟಕ ಪ್ರದರ್ಶಿಸಿ ಅರಣ್ಯ ಪ್ರದೇಶಕ್ಕೆ ಬೀಳುವ ಬೆಂಕಿಯಿAದ ವನ್ಯಜೀವಿ ಮತ್ತು ಪರಿಸರಕ್ಕಾಗುವ ಅನಾಹುತಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕರಾದ ಎ.ಆರ್.ಲೋಕೇಶ್, ಜಯಕುಮಾರ್, ಸಿಬ್ಬಂದಿ, ಗ್ರಾಮ ಪ್ರಮುಖರು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ನಂತರ ಕಲಾವಿದರ ತಂಡದವರು ಕೊಡ್ಲಿಪೇಟೆ, ಅಂಕನಹಳ್ಳಿ, ಆಲೂರುಸಿದ್ದಾಪುರ ಗ್ರಾಮದಲ್ಲಿ ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.