ಕುಶಾಲನಗರ, ಫೆ. ೨೭: ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಹಾಗೂ ರಾಜ್ಯ ಪಡಿತರ ವಿತರಕರ ಸಮಾವೇಶ ತಾ. ೨೯ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಶಾಲನಗರ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ.ಎನ್. ಅಶೋಕ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆಹಾರ ನಾಗರಿಕ ಸರಬರಾಜು ನಿಗಮವು ಪ್ರಾರಂಭವಾಗಿ ಸುವರ್ಣ ಮಹೋತ್ಸವ ಆಚರಣೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಪಡಿತರ ವಿತರಕರ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ತಾ. ೨೯ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಜಿಲ್ಲೆಯ ಪಡಿತರ ವಿತರಕರು, ವಿ.ಎಸ್.ಎಸ್.ಎನ್. ಕಾರ್ಯದರ್ಶಿಗಳು, ನ್ಯಾಯಬೆಲೆ ಅಂಗಡಿ ಕಾರ್ಡುದಾರರು ಈ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ಕೆ.ಎನ್. ಅಶೋಕ್ ತಿಳಿಸಿದ್ದಾರೆ.
ಜಿಲ್ಲೆಯಿಂದ ತೆರಳಲು ಈಗಾಗಲೇ ಬಸ್ ವ್ಯವಸ್ಥೆಯನ್ನು ಶಾಸಕರಾದ ಡಾ.ಮಂಥರ್ ಗೌಡ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ವಿತರಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಪಡಿತರ ವಿತರಕರ ಹಲವು ಬೇಡಿಕೆಗಳನ್ನು ಈ ಸಮಾವೇಶದಲ್ಲಿ ಮುಂದಿಡಲಾಗುವುದು ಎಂದರು. ಜಿಲ್ಲೆಯಲ್ಲಿ ೨೭೪ ಪಡಿತರ ವಿತರಕ ಅಂಗಡಿಗಳಿದ್ದು ಪ್ರತಿ ಅಂಗಡಿಗಳಿAದ ಐದು ಮಂದಿ ಸಮಾವೇಶಕ್ಕೆ ತೆರಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಅರುಣಚಂದ್ರ, ಕಾರ್ಯದರ್ಶಿ ವಿನಯ್ ಕುಮಾರ್ ಸಹ ಕಾರ್ಯದರ್ಶಿ ವರದರಾಜ ದಾಸ್ ಮತ್ತು ನಿರ್ದೇಶಕರಾದ ಹರೀಶ್ ಕುಮಾರ್ ಇದ್ದರು.