ಕಡಂಗ, ಫೆ. ೩: ಸಮೀಪದ ಕಡಂಗದ ಕೊಕ್ಕಂಡಬಾಣಿ ದರ್ಗಾದ ಉರೂಸ್ಗೆ ಶುಕ್ರವಾರ ಚಾಲನೆ ನೀಡಲಾಯಿತು. ಶುಕ್ರವಾರ ಮಧ್ಯಾಹ್ನದ ನಮಾಜ್ ಬಳಿಕ ಮುಹ್ಯದ್ದೀನ್ ಜುಮಾ ಮಸೀದಿಯಿಂದ ಹೊರಟ ಬೃಹತ್ ಜಾಥಾವು ಕೊಕ್ಕಂಡ ಬಾಣೆ ದರ್ಗಾವನ್ನು ತಲುಪಿತು. ಉರೂಸ್ನ ಧ್ವಜಾರೋಹಣ ಕಾರ್ಯಕ್ರಮವನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ಲ ನೆರವೇರಿಸಿದರು. ಮದ್ರಸದ ಮುಖ್ಯೋಪಾಧ್ಯಾಯ ಶುಹೈಬ್ ಫೈಜಿ ಮಾತನಾಡಿ, ಉರೂಸ್ ಅಂಗವಾಗಿ ಐದು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಾ ರಂಭದಲ್ಲಿ ನಂತರ ಜಮಾಅತ್ ಖತೀಬ ಮೊಹಮ್ಮದ್ ರಫೀಕ್ ಲತೀಫಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಸಹ ಕಾರ್ಯದರ್ಶಿ ಸಮೀರ್ ಪಿ.ಹೆಚ್., ಸಂಸ್ಥೆಯ ಉಪಾಧ್ಯಕ್ಷ ಸಲಾಂ, ಹ್ಯಾರಿಸ್, ಯೂಸಫ್ ಉಸ್ತಾದ್, ಬದ್ರಿಯಾ ಜುಮಾ ಮಸೀದಿ ಖತೀಬ ಇಸ್ಮಾಯಿಲ್ ಲತೀಫಿ, ಉಸ್ಮಾನ್ ಕೆ.ಇ., ರಜಾಕ್ ಹಾಜರಿದ್ದರು. ಮಜಲಿಸುನ್ನೋರ್ ಕಾರ್ಯಕ್ರಮಕ್ಕೆ ಕೊಡಗು ನಾಯಿಬ್ ಖಾಜಿ ಗಳಾದ ಅಬ್ದುಲ್ಲ ಫೈಜಿ ನೇತೃತ್ವ ನೀಡಿದರು. ದುಹ ಕಾರ್ಯಕ್ರಮವನ್ನು ಕೇರಳದ ಸಯ್ಯದ್ ಅಲಿ ಕುಂಬೂಳ್ ನಿರ್ವಹಿಸಿದರು. ಸ್ವಾಗತ ಮತ್ತು ವಂದನೆಯನ್ನು ಶುಹೈಬ್ ಫೈಜಿ ನಿರ್ವಹಿಸಿದರು. ವೇದಿಕೆಯಲ್ಲಿ ಎಡಪಾಲ ಜಮಾಅತ್ ಅಧ್ಯಕ್ಷ ಶಾಫಿ, ಮಹಮ್ಮದ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಮೊಯಿದು ಉಪಸ್ಥಿತರಿದ್ದರು.