ಮುಳ್ಳೂರು, ಫೆ. ೪: ಭಾರತೀಯ ಭೂಸೇನೆಯಲ್ಲಿ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಗೊಂಡು ತವರಿಗೆ ಮರಳಿದ ಸೈನಿಕನಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಕೊಡಗು-ಹಾಸನ ಗಡಿ ಭಾಗದಲ್ಲಿರುವ ಹಣಸೆ ಗ್ರಾಮದ ಶಶಿಕುಮಾರ್ ಭಾರತೀಯ ಭೂಸೇನೆಯಲ್ಲಿ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ಜನವರಿ ೩೧ ರಂದು ನಿವೃತ್ತಿಗೊಂಡಿದ್ದರು. ಶನಿವಾರ ಅವರು ತವರೂರು ಹಣಸೆ ಗ್ರಾಮಕ್ಕೆ ಆಗಮಿಸಿದರು.
ಈ ಸಂದರ್ಭ ಶಶಿಕುಮಾರ್ ಪೋಷಕರು, ಪತ್ನಿ, ಹಣಸೆ ಗ್ರಾಮಸ್ಥರು, ಸ್ನೇಹಿತರ ಬಳಗ ಶನಿವಾರಸಂತೆಯಲ್ಲಿ ಅದ್ದೂರಿ ಸ್ವಾಗತದೊಂದಿಗೆ ತವರೂರಿಗೆ ಬರಮಾಡಿಕೊಂಡರು. ಪಟ್ಟಣದ ಕೆಆರ್ಸಿ ವೃತ್ತದಲ್ಲಿ ಗ್ರಾಮಸ್ಥರು, ಸ್ನೇಹಿತರ ಬಳಗ ತೆರೆದ ವಾಹನದಲ್ಲಿ ಶಶಿಕುಮಾರ್ ಅವರಿಗೆ ಹೂವಿನ ಹಾರ ಹಾಕಿ ಮೆರವಣಿಗೆ ನಡೆಸಿದರು. ಪಟ್ಟಣದ ಐ.ಬಿ. ರಸ್ತೆಯಲ್ಲಿರುವ ನಿವೃತ್ತ ಸೈನಿಕ ಸಂಘಕ್ಕೆ ಶಶಿಕುಮಾರ್ ಅವರನ್ನು ಬರಮಾಡಿಕೊಳ್ಳಲಾಯಿತು
ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಿವೃತ್ತ ಸೈನಿಕ ಶಶಿಕುಮಾರ್, ಸೇನೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಕರು ಸೇನೆಗೆ ಸೇರಲು ಆಸಕ್ತಿವಹಿಸಬೇಕೆಂದರು.