ಮಡಿಕೇರಿ, ಜ. ೩೧: ಕೇಂದ್ರ ಸರಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿರುವದರಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಅತಿ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದೆ. ಆದರೆ, ಮರುಪಾವತಿಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ವಂಚನೆ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಎಂ.ಲಕ್ಷö್ಮಣ್ ಆರೋಪ ಮಾಡಿದ್ದಾರೆ.

ಪತ್ರಿಕಾಭವನದಲ್ಲಿಂದು ಈ ಕುರಿತಾದ ಅಂಕಿ ಅಂಶಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು; ಕರ್ನಾಟಕದಿಂದ ಕೇಂದ್ರಕ್ಕೆ ೪ ಲಕ್ಷದ ೮೧ ಸಾವಿರ ಕೋಟಿ ತೆರಿಗೆಯನ್ನು ವಿವಿಧ ಮೂಲಗಳಿಂದ ಪಾವತಿ ಮಾಡುತ್ತಿದೆ. ಜಿಎಸ್‌ಟಿ ಮೂಲಕ ೧.೪ಲಕ್ಷ ಕೋಟಿ ಪಾವತಿ ಮಾಡುತ್ತಿದೆ. ತೆರಿಗೆ ನೀತಿ ಆಯೋಗದ ನಿಯಮದ ಪ್ರಕಾರ ಶೇ.೪೨ರಂತೆ ರಾಜ್ಯದ ಪಾಲು ವಾಪಸ್ ನೀಡಬೇಕು. ಆದರೆ ಕೇಂದ್ರ ಸರಕಾರ ಕೇವಲ ಶೇ.೧೦ರಂತೆ ೫೦,೨೫೭ಕೋಟಿ ಮಾತ್ರ ನೀಡಿದೆ. ಕೇಂದ್ರ ಬಜೆಟ್ ಗಾತ್ರ ೪೫ಲಕ್ಷ ಕೋಟಿಯಾಗಿದ್ದು, ಪಾಲು ಅನುದಾನ ಕೂಡ ಕಡಿಮೆಯಾಗಿದ್ದು, ಅಂದಾಜು ೩೫ಸಾವಿರ ಕೋಟಿಯಷ್ಟು ವಂಚನೆ ಮಾಡಲಾಗಿದೆ ಎಂದು ಹೇಳಿದರು. ಹಿಂದೆ ೧೯೬೭ರಿಂದ ೨೦೧೪ರವರೆಗೆ ಆಡಳಿತದಲ್ಲಿದ್ದ ವಿವಿಧ ಸರಕಾರಗಳು ದೇಶದ ಅಭಿವೃದ್ಧಿಗಾಗಿ ೫೩.೧೧ಲಕ್ಷ ಕೋಟಿ ಸಾಲ ಮಾಡಿದ್ದವು. ಆದರೆ ಇದೀಗ ಕಳೆದ ೧೦ ವರ್ಷಗಳಲ್ಲಿ ಸಾಲದ ಮೊತ್ತ ೧೭೩ಲಕ್ಷ ಕೋಟಿಗೆ ಏರಿಕೆಯಾಗಿದೆ. ಯಾವದೇ ಅಭಿವೃದ್ಧಿಯಾಗಿಲ್ಲ, ಕಾರ್ಪೋರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡಲಾಗಿದೆ, ಪ್ರತಿ ಪ್ರಜೆಯ ತಲೆ ಮೇಲೆ ೪.೫ ಲಕ್ಷ ಸಾಲದ ಹೊರೆ ಹೊರಿಸಲಾಗಿದೆ. ರೈತರ ಸಾಲ ಮನ್ನಾ ಮಾಡಲಾಗಿಲ್ಲ. ರಾಜ್ಯದ ಜನತೆ ಬರ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ಕೇಂದ್ರದಿAದ ಇನ್ನೂ ಕೂಡ ಪರಿಹಾರ ಹಣ ಬಂದಿಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಸಾಮಾಜಿಕ ಜಾಲತಾಣ ಅಧ್ಯಕ್ಷ ಹೊಸೂರು ಸೂರಜ್, ಮೈಸೂರಿನ ಮಹೇಶ್ ಇದ್ದರು.