ಮಡಿಕೇರಿ, ಜ. ೩೧: ಈ ಹಿಂದೆ

ಬಿಜೆಪಿ ಸರಕಾರ ಆಡಳಿತವಿದ್ದ ಸಂದರ್ಭ ಆಗಿನ ಶಾಸಕರುಗಳ ಮೂಲಕ ಜಿಲ್ಲೆಯಲ್ಲಿ ಜಾರಿಗೊ ಳಿಸಲಾಗಿದ್ದ ಯೋಜನೆಗಳನ್ನು ಇದೀಗ ಉದ್ಘಾಟನೆ ಮಾಡುತ್ತಿರುವದೇ ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯ ಗಳೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ಎಂ.ರವಿ ಕಾಳಪ್ಪ, ಹಿಂದಿನ ಶಾಸಕರ ಅವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಸೊಮವಾರಪೇಟೆಯ ಟರ್ಫ್ ಮೈದಾನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಸುಸಜ್ಜಿತ ಜಿಲ್ಲಾಸ್ಪತ್ರೆ ಕಟ್ಟಡ, ಹೀಗೇ ಹಲವು ಯೋಜನೆಗಳು ಹಿಂದಿನ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಆಗಿದೆ. ಆದರೆ ಈಗಿನ ಶಾಸಕರು ಅದರ ಉದ್ಘಾಟನೆ ಮಾಡಿ ಅದನ್ನೇ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.

ಚರ್ಚೆಗೆ ಸಿದ್ಧ

ಸಂಸದ ಪ್ರತಾಪ್‌ಸಿಂಹ ಯಾವದೇ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಆರೋಪ ಮಾಡಲಾಗುತ್ತಿದೆ. ರೈಲ್ವೇ ಯೋಜನೆ ಬಗ್ಗೆ ಟೀಕೆ ಮಾಡಲಾಗುತ್ತಿದೆ. ೨೦೧೮ರಲ್ಲಿ ರೈಲ್ವೇ ಯೋಜನೆ ತರುವದಾಗಿ ಹೇಳಿದ್ದು, ಈ ಸಂಬAಧ ಭೂ ಸ್ವಾಧೀನ ಹಾಗೂ ಶೇ.೫೦ರಷ್ಟು ಅನುದಾನ ರಾಜ್ಯ ಸರಕಾರದಿಂದ ಭರಿಸುವಂತೆ ಪ್ರಸ್ತಾಪ ಮುಂದಿಟ್ಟಾಗ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದರು. ಆಗ ೧೯೫೪ ಕೋಟಿ ವೆಚ್ಚದ ಯೋಜನೆಯಾಗಿದ್ದು, ಸಚಿವ ಪಿಯೂಷ್ ಗೋಯಲ್ ಮಂಡಿಸಿದ ರೈಲ್ವೇ ಬಜೆಟ್‌ನಲ್ಲಿ ಘೋಷಣೆ ಆಗಿ ಪಿಂಕ್ ಬುಕ್‌ನಲ್ಲಿ ದಾಖಲಾಗಿತ್ತು. ಇದೀಗ ಮತ್ತೆ ಯೋಜನಾ ವರದಿ ತಯಾರಿಸಲಾಗಿದ್ದು, ಮೊತ್ತ ೩೦೯೨ ಕೋಟಿಗೆ ಏರಿಕೆಯಾಗಿದ್ದು, ಕೇಂದ್ರಕ್ಕೆ ಸಲ್ಲಿಸಲಾಗಿದೆ. ವೀರಾಜಪೇಟೆ ನಗರಕ್ಕೆ ಕುಡಿಯುವ ನೀರಿಗೆ ೫೮ ಕೋಟಿಯ ಯೋಜನೆ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಆಗಿರುವದನ್ನು ಈಗಿನ ಶಾಸಕರು ತಾನು ಮಾಡಿರುವದಾಗಿ ಹೇಳಿಕೊಳ್ಳುತ್ತಿರುವದು ಹಾಸ್ಯಾಸ್ಪದ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಹೆದ್ದಾರಿ, ಚತುಷ್ಪಥ ರಸ್ತೆಗಳ ನಿರ್ಮಾಣ ಸೇರಿದಂತೆ ಕೊಡವ ಸಮಾಜಗಳ ಅಭಿವೃದ್ಧಿಗೆ ರೂ.೧೦ ಕೋಟಿ ಬಿಡುಗಡೆಯಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಈ ಬಗ್ಗೆ ಚರ್ಚೆಗೆ ಸಂಸದರು, ಮಾಜಿ ಶಾಸಕರುಗಳು ಸಿದ್ಧರಿದ್ದಾರೆ. ಈಗಿನ ಶಾಸಕರುಗಳನ್ನು ಕರೆಯಿಸಿ ಕಾಂಗ್ರೆಸ್‌ನವರು ವೇದಿಕೆ ಸಿದ್ಧಪಡಿಸಲಿ. ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ರವಿಕಾಳಪ್ಪ ಸವಾಲೆಸೆದರು.

ಅನ್ನ ಭಾಗ್ಯಕ್ಕೆ ಬರುತ್ತಿರುವ ಅಕ್ಕಿ ಕೇಂದ್ರ ಸರಕಾರದ್ದಾಗಿದೆ. ಸಾಧ್ಯವಾಗುವದಾದರೆ ಚುನಾವಣೆ ಸಂದರ್ಭ ಘೋಷಣೆ ಮಾಡಿದ ಹತ್ತು ಕೆ.ಜಿ. ಅಕ್ಕಿ ನೀಡಲಿ ಎಂದು ಸವಾಲೆಸೆದ ರವಿ ಕಾಳಪ್ಪ, ಉಚಿತ ಬಸ್ ಪ್ರಯಾಣದಿಂದಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಬವಣೆ ಪಡುವಂತಾಗಿದೆ. ಹೊಸ ಬಸ್‌ಗಳನ್ನು ನೀಡಲಾಗುತ್ತಿಲ್ಲ, ಬದಲಿಗೆ ಗ್ರಾಮಾಂತರ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಉಚಿತ ವಿದ್ಯುತ್ ಯೋಜನೆ ಯಾರಿಗೂ ಸರಿಯಾಗಿ ಸಿಗುತ್ತಿಲ್ಲ. ಲೋಕಸಭಾ ಚುನಾವಣೆ ಬಳಿಕ ದರ ಮೂರು ಪಟ್ಟು ಹೆಚ್ಚಾಗಲಿದೆ. ಯುವನಿಧಿ ಇನ್ನೂ ಕೂಡ ಫಲಾನುಭವಿಗಳನ್ನು ಆಯ್ಕೆ ಮಾಡಲಾಗದೆ ಗೊಂದಲದಲ್ಲೇ ಕಾಲ ದೂಡಲಾಗುತ್ತಿದೆ. ಯಡಿಯೂರಪ್ಪ ಸರಕಾರ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಲಾಗಿದೆ. ರೈತರ ಮಕ್ಕಳ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ಭಾಗ್ಯಗಳ ಪೂರೈಕೆಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಭಾಗ್ಯದಿಂದಾಗಿ ಸರಕಾರ ಹಾಗೂ ಜನತೆಗೆ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.

ಗ್ರಾಮ ಚಲೋ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಎದುರಿಸಲು ಸನ್ನದ್ಧರಾಗಿದ್ದೇವೆ. ಗ್ರಾಮ ಮಟ್ಟದಲ್ಲಿ ಪಕ್ಷ ಬಲಪಡಿಸುವ ಉದ್ದೇಶದೊಂದಿಗೆ ಮುಂದಿನ ವಾರದಿಂದ ಗ್ರಾಮ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಲಾಗುವದು ಎಂದರು.

ಕಾರ್ಯಕಾರಿಣಿ ಸಭೆ

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ ಮಾತನಾಡಿ; ತಾ.೨ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಂದು ನೂತನ ಅಧ್ಯಕ್ಷರ ಪದಗ್ರಹಣ ಕೂಡ ನಡೆಯಲಿದ್ದು, ಆರ್.ಅಶೋಕ್, ರಾಜ್ಯ ಕಾರ್ಯದರ್ಶಿ ಸುನಿಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ರಾಜ್ಯ, ಜಿಲ್ಲೆಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಮನು ಮಂಜುನಾಥ್ ಇದ್ದರು.