ನಾಪೋಕ್ಲು, ಜ. ೩೦: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಶುಕ್ರವಾರ ಇಲ್ಲಿನ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೆರವೇರಿತು.
ನಾಪೋಕ್ಲು ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿಗಳಲ್ಲಿ ಯಾತ್ರೆ ನಡೆದಿದ್ದು ಜನರಿಗೆ ಆಯುಷ್ಮಾನ್ ಭಾರತ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ವಿವಿಧ ಇಲಾಖೆಗಳು ಹಾಗೂ ಬ್ಯಾಂಕಿನ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ೫ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಯಿತು. ಈ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೇಂದ್ರ ಸರಕಾರದ ಯೋಜನೆಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರಿಗೆ ಅನುಕೂಲವಾಗುವ ಕಿಸಾನ್ ಡ್ರೋನ್ ಪ್ರದರ್ಶನ ಗಮನ ಸೆಳೆಯಿತು. ಪ್ರದರ್ಶನ ವ್ಯಾನ್ನಲ್ಲಿ ವಿವಿಧ ಯೋಜನೆಗಳಿಗೆ ಸಂಬAಧಿಸಿದ ವೀಡಿಯೋಗಳನ್ನು ಪ್ರದರ್ಶಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಉಚಿತವಾಗಿ ಕ್ಯಾಲೆಂಡರ್, ಮಾಹಿತಿ ಕೈಪಿಡಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೆಟೀರ ಹೇಮಾ ಅರುಣ್, ಲೀಡ್ ಬ್ಯಾಂಕ್ ಜಿಲ್ಲಾ ಪ್ರಬಾರ ಅಧಿಕಾರಿ ಸಿದ್ದರಾಮಯ್ಯ, ಕಾಫಿ ಬೋರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ರಾಜೇಶ್ ಕುಮಾರ್ ವಿ., ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು, ಭಾರತ್ ಪೆಟ್ರೋಲಿಯಂ ಅಧಿಕಾರಿ ನಿತೀನ್, ಕೆ.ವಿ.ಕೆ.ಯ ಅಧಿಕಾರಿ ಸುರೇಶ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಗಂಗಾಧರ ನಾಯಕ್, ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.