ಗೋಣಿಕೊಪ್ಪಲು, ಜ. ೩೦: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಸರಳ ಬಹುಮತವಿದ್ದ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಬಿಸಿಎಂ(ಬಿ) ಮೀಸಲಾತಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಅಣ್ಣೀರ ಹರೀಶ್ ೧೧ ಮತ ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯರು ಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಡ್ಡಂಡ ನಿಲನ್ ಸುಬ್ರಮಣಿ ೮ ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪಿ.ಕೆ.ವಿಜಯ್ ಕುಮಾರ್ ೭ ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು. ೧ ಮತವು ತಿರಸ್ಕೃತಗೊಂಡಿತ್ತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಒಟ್ಟು ೨೦ ಸದಸ್ಯರ ಸಂಖ್ಯಾಬಲ ಹೊಂದಿದ್ದು ಬಿಜೆಪಿ ಬೆಂಬಲಿತ ಸದಸ್ಯರು ೧೧ ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ೮ ಮಂದಿ ಹಾಗೂ ಸ್ವತಂತ್ರ ಸದಸ್ಯರುಗಳಾಗಿ ಒಬ್ಬರು ಇದ್ದಾರೆ.

೨ನೇ ಅವಧಿಗೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಅಧಿಕಾರಕ್ಕಾಗಿ ತೀವ್ರ ರೀತಿಯ ಕಸರತ್ತು ನಡೆದಿತ್ತು. ಚುನಾವಣೆಗೂ ಮುನ್ನಾ ದಿನವೇ ಎರಡು ಪಕ್ಷದ ಬೆಂಬಲಿತ ಸದಸ್ಯರನ್ನು ಆಯಯಾ ಪಕ್ಷದ ಮುಖಂಡರು ರೆಸಾರ್ಟ್ಗೆ ಕರೆದೊಯ್ದಿದ್ದರು. ಬೆಳಿಗ್ಗೆ ಚುನಾವಣೆ ಸಂದರ್ಭದಲ್ಲಿ ಸದಸ್ಯರುಗಳು ಒಟ್ಟಾಗಿ ಆಗಮಿಸಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣೆ ಹಿನೆÀ್ನಲೆಯಲ್ಲಿ ಪಂಚಾಯಿತಿ ಆವರಣಕ್ಕೆ ಮುಂಜಾನೆಯೆ ಬಿಜೆಪಿ ಪಕ್ಷದ ಪ್ರಮುಖರಾದ ನೆಲ್ಲಿರ ಚಲನ್ ಕುಮಾರ್, ಗುಮ್ಮಟ್ಟಿರ ಕಿಲನ್ ಗಣಪತಿ, ಮುದ್ದಿಯಡ ಮಂಜು, ಗುಮ್ಮಟ್ಟಿರ ದರ್ಶನ್ ಸೇರಿದಂತೆ ಹಲವರು ಜಮಾವಣೆಗೊಂಡಿದ್ದರು.

(ಮೊದಲ ಪುಟದಿಂದ) ಕಾಂಗ್ರೆಸ್ ಪಕ್ಷದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಪಕ್ಷದ ಪ್ರಮುಖರಾದ ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಶಾಜಿ ಅಚ್ಚುತ್ತನ್, ಅಪ್ಪಚಂಗಡ ಮೋಟಯ್ಯ, ಪಿ.ಆರ್. ಪಂಕಜ, ಕಡೇಮಾಡ ಕುಸುಮ ಜೋಯಪ್ಪ, ಬಾನಂಡ ಪ್ರಥ್ವಿ, ತೀತಿಮಾಡ ಸದಾ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಉಮೇಶ್ ಕೇಚಮಯ್ಯ, ರೋಶನ್, ಕಂದಾ ದೇವಯ್ಯ, ಮಲ್ಲಂಡ ಪ್ರಕಾಶ್, ಧನಲಕ್ಷಿö್ಮ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಧ್ಯಾನ್ ಸುಬ್ಬಯ್ಯ, ಶರತ್‌ಕಾಂತ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಪೊನ್ನಂಪೇಟೆ ತಾಲೂಕು ಪ್ರಬಾರ ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ೧ ಗಂಟೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಘೋಷಣೆ ಮಾಡುತ್ತಿದ್ದಂತೆಯೇ ಪಂಚಾಯಿತಿ ಆವರಣದಲ್ಲಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಯಘೋಷ ಹಾಕುವ ಮೂಲಕ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಪಂಚಾಯಿತಿ ಮುಂಭಾಗದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಹಾಗೂ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಕ್ಕೆ ಜನತೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿಲ್ಲದಿದ್ದರೂ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿಯ ದೃಷ್ಠಿಯಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ ಎಂದರು.

ನೂತನ ಅಧ್ಯಕ್ಷ ಅಣ್ಣಿರ ಹರೀಶ್ ಹಾಗೂ ಆಲೀರ ರಶೀದ್ ಪ್ರತಿಕ್ರಿಯಿಸಿ ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು; ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿ ಕೊಳ್ಳಲಾಗುವುದು ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಗಿರಿಜ ವೆಂಟೇಶ್, ಬೊಟ್ಟಂಗಡ ದಶಮಿ ಸದಾ, ಕೆ.ವಿ. ರಾಮಕೃಷ್ಣ, ಎಂ.ಕೆ. ಮಧುಕುಮಾರ್, ವಿಜಯಕುಮಾರ್, ಹೆಚ್.ಎನ್.ರವಿ, ಮಂಜುಳ ಮಣಿಕಂಠ, ಎ.ಎ. ಅಜೀಜ್, ಅಡ್ಡಂಡ ನಿಲನ್, ಪಿ.ಟಿ. ರಮೇಶ್ ಹಾಗೂ ಎಂ.ಡಿ. ವಿಮಲ. ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಮೂಕಳೇರ ಸುಮಿತ, ಆಲೀರ ರಶೀದ್, ನೇತ್ರಾವತಿ, ಕೋಳೆರ ಯಮುನ, ಭಾರತಿ, ಪಿ.ಜಿ. ಯಮುನ, ಅಣ್ಣಿರ ಎಂ. ಹರೀಶ್, ಜುನೈದ್, ಕರ್ತಮಾಡ ರಶಿಕಾ ಅಶ್ವತ್, ಸ್ವತಂತ್ರ ಸದಸ್ಯರಾದ ಅಮ್ಮತ್ತಿರ ಆರತಿ ಸುರೇಶ್ ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಗಳಾಗಿ ಸುಧೀಂದ್ರ ರವಿಕುಮಾರ್, ಮಂಜುನಾಥ್ ವಿ. ಅರ್ಷಲ್ ಮಂದಣ್ಣ, ಯಶ್ವಂತ್ ಕುಮಾರ್, ಪೂವಯ್ಯ ಕಾರ್ಯ ನಿರ್ವಹಿಸಿದರು.

-ಹೆಚ್.ಕೆ.ಜಗದೀಶ್