ಮಡಿಕೇರಿ, ಜ. ೩೦: ರಾಜಕೀಯ ಲಾಭಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರಕಾರ ಹಾಗೂ ಸ್ಥಳೀಯ ಶಾಸಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಿನಲ್ಲಿ ಸಂಸದ ಪ್ರತಾಪ್‌ಸಿಂಹ ಜಿಲ್ಲೆಯ ಕಡೆ ತಿರುಗಿ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ರಾಜಕೀಯವಾಗಿ ಲಾಭಗಳಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಶಾಸಕರನ್ನು ಟೀಕೆ ಮಾಡುತ್ತಿದ್ದು, ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ೭ ತಿಂಗಳಿನಲ್ಲಿ ೭ ರೂಪಾಯಿ ತಂದಿಲ್ಲ ಎನ್ನುವ ಅವರು ಸಂಸದರಾದÀ ಮೊದಲ ೭ ತಿಂಗಳಿನಲ್ಲಿ ರೂ. ೭೦ ಪೈಸೆ ತಂದಿದ್ದರೆ ದಾಖಲೆ ಸಹಿತ ಬಿಡುಗಡೆ ಮಾಡಲಿ. ಸರಕಾರ ಆದ್ಯತೆ ಮೇರೆಗೆ ಕೊಡಗಿನ ಅಭಿವೃದ್ಧಿ ಅನುದಾನ ನೀಡುತ್ತಿದೆ. ಸ್ಥಳೀಯ ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ ಜನಪರವಾಗಿ ನಡೆದುಕೊಂಡು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಸಾಧನೆಯ ಕುರಿತು ಪ್ರತಾಪ್ ಸಿಂಹ ಶ್ವೇತ ಪತ್ರ ಹೊರಡಿಸಲಿ. ಅಭಿವೃದ್ಧಿ ಕುರಿತು ಮಾತನಾಡಲು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದರು.

ಗ್ಯಾರಂಟಿ ಯೋಜನೆ ಮೂಲಕ ನೂರಾರು ಕೋಟಿ ಹಣ ಜನರಿಗೆ ತಲುಪಿದೆ. ಪ್ರತಾಪ್ ಸಿಂಹ ಅವರ ಕೆಲಸದ ಬಗ್ಗೆ ಸ್ವಪಕ್ಷದಲ್ಲಿಯೇ ಅಸಮಾಧಾನವಿದೆ. ಮೋದಿ ಭಕ್ತಿಯಿಂದ ಚುನಾವಣೆ ಎದುರಿಸುವ ಪ್ರತಾಪ್ ಸಿಂಹಗೆ ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲ್ಲುವ ತಾಕತ್ತಿಲ್ಲ. ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ನಮ್ಮ ಪಕ್ಷದ ನಾಯಕರನ್ನು ಎತ್ತಿಕಟ್ಟುವ ಕೆಲಸ ಮಾಡಬೇಡಿ ಎಂದ ಧರ್ಮಜ ಉತ್ತಪ್ಪ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಪ್ರತಾಪ್ ಸಿಂಹ ಕೆ.ಜಿ. ಬೋಪಯ್ಯ ಅವರೊಂದಿಗೆ ನಡೆದುಕೊಂಡ ರೀತಿ ಜನರಿಗೆ ತಿಳಿದಿದೆ. ಇದೀಗ ಚುನಾವಣೆಯಲ್ಲಿ

(ಮೊದಲ ಪುಟದಿಂದ) ಗೆಲ್ಲಲು ಅವರೊಂದಿಗೆ ಆತ್ಮೀಯರಾಗಿದ್ದಾರೆ ಎಂದು ಟೀಕಿಸಿದರು. ಜಲಮಂಡಳಿ ಮೂಲಕ ರೂ. ೫೮ ಕೋಟಿ ಹಣವನ್ನು ವೀರಾಜಪೇಟೆ ಕ್ಷೇತ್ರಕ್ಕೆ ತರಲಾಗಿದೆ. ಭೂಸಾರಿಗೆ ನಿರ್ದೇಶನಾಲಯದಿಂದ ವೀರಾಜಪೇಟೆಯಲ್ಲಿ ಬೀದಿ ದೀಪ, ಪಾದಚಾರಿ ರಸ್ತೆಗೆ ರೂ. ೫ ಕೋಟಿ, ಗೋಣಿಕೊಪ್ಪದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ರೂ. ೨ ಕೋಟಿ ಮಂಜೂರಾತಿಯನ್ನು ಶಾಸಕ ಪೊನ್ನಣ್ಣ ಅವರು ಮಾಡಿಸಿಕೊಂಡಿದ್ದಾರೆ. ಇದೇ ರೀತಿ ಅನೇಕ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಶಾಸಕರು ಪ್ರಯತ್ನಿಸಿ ಸಫಲರಾಗುತ್ತಿದ್ದಾರೆ. ಕಕ್ಕೆಹೊಳೆ ಸೇತುವೆಗೂ ಹಣವನ್ನು ಶಾಸಕ ಮಂಥರ್ ಗೌಡ ಬಿಡುಗಡೆಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಹೆದ್ದಾರಿ ಬದಿ ತಡೆಗೋಡೆ ನಿರ್ವಹಣೆಗೆಂದು ಬರುವ ಹಣವನ್ನು ತಂದಿದ್ದು ತಾನೇ ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿಕೊಳ್ಳುತ್ತ ಭೂಮಿಪೂಜೆ ಮಾಡುತ್ತಾರೆ. ಅವರ ರೀತಿ ನಮ್ಮ ಶಾಸಕರು ಮಾಡುವುದಿಲ್ಲ. ರೈಲ್ವೆ ಯೋಜನೆ ತರುವುದಾಗಿ ಹೇಳಿದ ನಂತರ ಜಿಲ್ಲೆಯಲ್ಲಿದ್ದ ರೈಲ್ವೆ ಟಿಕೆಟ್ ಕೌಂಟರ್ ಅನ್ನು ಮುಚ್ಚಲಾಗಿದೆ. ಟವರ್ ಸಂಖ್ಯೆ ಹೆಚ್ಚಿಸಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಹಲವು ಗ್ರಾಮಗಳಲ್ಲಿ ಇಂದಿಗೂ ಬಿ.ಎಸ್.ಎನ್.ಎಲ್. ಟವರ್‌ಗಳೇ ಇಲ್ಲ. ಖಾಸಗಿ ಟವರ್‌ಗಳನ್ನು ಅವಲಂಬಿಸಿದ್ದಾರೆ ಇದು ಅವರ ಆಡಳಿತ ವೈಖರಿ ಎಂದು ಕಿಡಿಕಾರಿದರು.

ಎಲ್ಲಾ ಶಾಸಕರಿಗೆ ತಲಾ ೨೫ ಕೋಟಿ ಹಣವನ್ನು ಸರಕಾರ ನೀಡಿದೆ. ಅದರಂತೆ ಜಿಲ್ಲೆಯ ಶಾಸಕರು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ತಲಾ ರೂ. ೧೭ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಅಮೃತ ಯೋಜನೆಗೆ ಶೇ. ೫೦ ಹಣವನ್ನು ನೀಡಿದ್ದು ಕಾಂಗ್ರೆಸ್ ಸರಕಾರ ಬಿಜೆಪಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ೨೦೧೪ರಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರತಾಪ್ ಸಿಂಹ ನೀಡಿದ ಪ್ರಣಾಳಿಕೆಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾದ ಬಗ್ಗೆ ಉಲ್ಲೇಖಿಸಿದ್ದರು. ೧೦ ವರ್ಷವಾದರೂ ಬೆಳೆಗಾರರ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ೨೦೧೮ರ ವೇಳೆಗೆ ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಇದೀಗ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ ಅವರು, ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡಬೇಡಿ. ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಕಾಂಗ್ರೆಸ್ ಶಾಸಕರು ಈ ಹಿಂದೆ ಜಿಲ್ಲೆಯಲ್ಲಿದ್ದಾಗ ಬೃಹತ್ ಸೇತುವೆಗಳನ್ನು ನಿರ್ಮಿಸಿದರು. ಬಿಜೆಪಿ ಶಾಸಕರಿದ್ದಾಗ ಏನು ಮಾಡಿದ್ದಾರೆ? ಪ್ರಸ್ತುತ ಶಾಸಕರ ಕೆಲಸ ಸಹಿಸಿಕೊಳ್ಳಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾ.ಪಂ. ವ್ಯಾಪ್ತಿಗೆ ಪ್ರತಾಪ್ ಸಿಂಹ ಭೇಟಿ ನೀಡಿಲ್ಲ. ಸ್ಥಳೀಯ ಶಾಸಕರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಟಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಜಿಲ್ಲಾ ವಕ್ತಾರ ತೆನ್ನೀರ ಮೈನಾ ಹಾಜರಿದ್ದರು.