ಕಣಿವೆ, ಜ. ೩೦: ಮನೆಯಿಂದ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ಗುಡ್ಡೆಹೊಸೂರಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಸ್ಕೂಟಿ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿವೆ.

ಗುಡ್ಡೆಹೊಸೂರಿನ ಬೊಳ್ಳೂರಿನಲ್ಲಿ ಸಹೋದರಿಯ ಮನೆಯಲ್ಲಿ ವಾಸವಿದ್ದ ಲಲಿತ (೫೩) ಮೃತ ಮಹಿಳೆ. ಮೂಲತಃ ಸಿದ್ದಾಪುರ ಅರೆಕಾಡು ಮೂಲದವ ರಾದ ಲಲಿತ ಕಳೆದ ಆರು ತಿಂಗಳ ಹಿಂದೆ ತಮ್ಮ ಪತಿ ಸತ್ಯನ್ ಎಂಬವರು ಹೃದಯಾಘಾತದಿಂದ ಮೃತಪಟ್ಟ ಬಳಿಕ ಬೊಳ್ಳೂರಿನಲ್ಲಿದ್ದ ತಮ್ಮ ಸಹೋದರಿಯ ಸಿಂಚನಾ ಎಂಬವರ ಮನೆಯಲ್ಲಿಯೇ ವಾಸವಿದ್ದರು ಎನ್ನಲಾಗಿದೆ. ಮಡಿಕೇರಿ ಹೆದ್ದಾರಿಯ ರೆಸಾರ್ಟ್ವೊಂದರಲ್ಲಿ ಉದ್ಯೋಗಿ ಯಾಗಿದ್ದ ಇವರು ಮಂಗಳವಾರ ಬೆಳಿಗ್ಗೆ ಎಂದಿನAತೆ ರೆಸಾರ್ಟ್ಗೆ ಸೋದರಿಯ

(ಮೊದಲ ಪುಟದಿಂದ) ಮಗಳು ಸಿಂಚನ ಎಂಬಾಕೆಯ ಸ್ಕೂಟಿಯಲ್ಲಿ (ಕೆಎ೧೨ ವಿ೬೯೨೭) ತೆರಳುತ್ತಿದ್ದಾಗ ಮಡಿಕೇರಿಯಿಂದ ಕುಶಾಲನಗರದತ್ತ ವೇಗವಾಗಿ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ (ಕೆಎ೦೯ ಎಫ್೫೩೮೬) ಗುಡ್ಡೆಹೊಸೂರಿನ ಹಾರಂಗಿ ರಸ್ತೆಯ ತಿರುವಿನ ತರಕಾರಿ ಅಂಗಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಲಿತ ಸುಮಾರು ೩೦ ಮೀಟರ್‌ನಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದು, ಮಾರಣಾಂತಿಕವಾಗಿ ಗಾಯಗೊಂಡಿದ್ದ ಲಲಿತ ಅವರನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಕೊನೆಯುಸಿರೆಳೆÀದಿದ್ದಾರೆ. ಸ್ಕೂಟಿ ಚಾಲಿಸುತ್ತಿದ್ದ ಸಿಂಚನಾಗೂ ಗಂಭೀರ ಗಾಯವಾಗಿದ್ದು ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಚನಾ ಕುಶಾಲನಗರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಬಸ್‌ನ ಹಿಂಬದಿಯ ಚಕ್ರಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ ಸ್ಕೂಟಿ ಹಾಗೂ ಸ್ಕೂಟಿಯಲ್ಲಿದ್ದ ಸಿಂಚನಾಳನ್ನು ಸಾಹಸಪಟ್ಟು ಹೊರತೆಗೆಯಲಾಯಿತು.

ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಸಾರಿಗೆ ಸಂಸ್ಥೆಯ ಬಸ್ ಅನ್ನು ವಶಕ್ಕೆ ಪಡೆದು ಬಸ್ ಚಾಲಕ ಶಿವಾನಂದ ವಿರುದ್ಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ : ಕೆ.ಎಸ್.ಮೂರ್ತಿ/ಗಣೇಶ್