ಮಡಿಕೇರಿ, ಜ. ೨೮: ಈ ಹಿಂದಿನ ಭಾರತೀಯ ಜನತಾ ಪಕ್ಷ ಸರಕಾರ ಘೋಷಿಸಿ, ಅನುಮೋದಿಸಿ, ಕಾರ್ಯ ರೂಪಕ್ಕೆ ತಂದಿದ್ದ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ನೂತನ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯ ಅಭ್ಯುಧಯಕ್ಕೆ ೭ ತಿಂಗಳಲ್ಲಿ ೭ ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಟೀಕಾಪ್ರಹಾರ ನಡೆಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪ ದಿನಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಹಾಗೂ ಜಿಲ್ಲೆಯ ಮಾಜಿ ಶಾಸಕರ ವಿರುದ್ಧ ಹಗುರವಾದ ಮಾತು ಗಳನ್ನಾಡಿದ್ದಾರೆ. ‘ಏನು ಕಡೆದು ಕಟ್ಟೆ ಹಾಕಿದ್ದಾರೆ ಎನ್ನುವ ಸಿದ್ದರಾಮಯ್ಯ ನೀವೇನು ಮಾಡಿದ್ದೀರ?’ ಎಂದು ಪ್ರಶ್ನಿಸಿದ ಅವರು, ೭ ತಿಂಗಳಲ್ಲಿ ೭ ರೂಪಾಯಿ ಅನುದಾನ ತಂದಿದ್ದರೆ ದಾಖಲೆ ಸಹಿತ ತೋರಿಸಲಿ ಎಂದು ಸವಾಲೆಸೆದರು. ಟೆಂಡರ್ ತೆರೆಯದ ಅನೇಕ ಕಾಮಗಾರಿಗಳಿಗೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿರುವುದು ಹಾಸ್ಯಾಸ್ಪದ ಎಂದರು.

ಮೊನ್ನೆ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯ ಒಂದು ರೂಪಾಯಿ ಅನುದಾನವೂ ಕಾಂಗ್ರೆಸ್ ಸರಕಾರದಲ್ಲ.

(ಮೊದಲ ಪುಟದಿಂದ) ಜಿಲ್ಲೆಯ ವಿವಿಧೆಡೆಗೆ ಅಮೃತ್ ೨.೦ ಯೋಜನೆ ಅಡಿ ಮಾಡಿದ ಒಟ್ಟು ರೂ. ೧೪೦ ಕೋಟಿ ಅನುದಾನ ಕೇಂದ್ರದ ೪೦%, ರಾಜ್ಯ ಸರಕಾರದ ೫೦% ಹಾಗೂ ಸ್ಥಳೀಯ ಸಂಸ್ಥೆಯ ೧೦% ಆಗಿದೆ. ಈ ಹಣವೂ ಕಳೆದ ಬಿಜೆಪಿ ಸರಕಾರ ನೀಡಿದ್ದು, ಸಿದ್ದರಾಮಯ್ಯ ಸರಕಾರ ನೀಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡವ ಸಮಾಜ ಅಭಿವೃದ್ಧಿಗೆ ಬಿಡುಗಡೆಯಾದ ರೂ. ೧೦ ಕೋಟಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನೀಡಿದ ಅನುದಾನವಾಗಿದೆ. ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಹಣ ವರ್ಗಾವಣೆಯೂ ಆಗಿದೆ. ಕೊಡವ ಸಮಾಜಗಳು ಕ್ರಿಯಾಯೋಜನೆ ನೀಡಬೇಕಾಗಿದೆ. ಕಾಂಗ್ರೆಸ್ಸಿಗರು ಇದು ನಮ್ಮ ಸರಕಾರ ನೀಡಿದ ಹಣ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರಕಾರ ಹಾಗೂ ತಾನು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡುತ್ತ ಬಂದಿದ್ದೇನೆ. ಸಿದ್ದರಾಮಯ್ಯ ಅವರು ಈ ಬಗ್ಗೆ ವಾಗ್ದಾನವನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.

ಬೆಳೆಗಾರರಿಗೆ ಪರಿಹಾರ ಧನ ನೀಡಬಹುದಿತ್ತು

ಪ್ರತಿಕೂಲ ಹವಾಮಾನದಿಂದ ಬೆಳೆಗಾರರು ಅನುಭವಿಸಿರುವ ನಷ್ಟವನ್ನು ರಾಜ್ಯದ ಬೊಕ್ಕಸದಿಂದ ನೀಡಿ ನಂತರ ಎನ್.ಡಿ.ಆರ್.ಎಫ್. ಹಣದಿಂದ ಅದನ್ನು ಸರಿದೂಗಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಸರಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ದೂರಿದರು.

ಮನಮೋಹನ್ ಸಿಂಗ್ ಅವಧಿಯಲ್ಲಿ ರೂ. ೩,೨೩೩ ಕೋಟಿ ಎನ್.ಡಿ.ಆರ್.ಎಫ್. ನಿಧಿ ಬಿಡುಗÀಡೆಯಾಗಿತ್ತು. ನರೇಂದ್ರ ಮೋದಿ ಸರಕಾರ ರೂ. ೧೧,೩೦೦ ಕೋಟಿ ನೀಡಿದೆ. ರಾಜ್ಯದ ಸಂಸದರು ಈ ಬಗ್ಗೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಕಾಂಗ್ರೆಸ್ ನಾಯಕರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನೆಗಳಿಗೆ ನೀರು ನುಗ್ಗಿದರೆ ರೂ. ೩,೮೦೦ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ. ೧೦ ಸಾವಿರಕ್ಕೆ ಏರಿಸಿದರು. ಅದೇ ರೀತಿ ಮನೆಗಳು ಹಾನಿಯಾದರೆ ರೂ. ೧ ಲಕ್ಷ ನೀಡುತ್ತಿದ್ದ ಹಣವನ್ನು ರೂ. ೫ ಲಕ್ಷಕ್ಕೆ ಹೆಚ್ಚಿಸಿದ್ದರು. ಇಂದಿನ ಸರಕಾರ ಕೇವಲ ಬರ ಹಾಗೂ ನೆರೆಗೆ ಮಾತ್ರ ಕೇಂದ್ರದಿAದ ಅನುದಾನ ಕೇಳುತ್ತಾರೆ ಎಂದರು.

ರೂ. ೩೪ ಸಾವಿರ ಕೋಟಿ ಕೃಷಿ ಸಂಬAಧಿತ ನಷ್ಟ ಎಂದು ರಾಜ್ಯ ಸರಕಾರ ಹೇಳುತ್ತದೆ. ಆದರೆ, ಕೇವಲ ೧೦೪ ಕೋಟಿ ಹಣ ಮಾತ್ರ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಹಿಂದಿನ ಮುಖ್ಯಮಂತ್ರಿ ಸಕಾಲದಿಂದ ರೈತರಿಗೆ ನೆರವಿಗೆ ಧಾವಿಸುತ್ತಿದ್ದರು. ಸಿದ್ದರಾಮಯ್ಯ ಕೊಡಗಿಗೆ ಬಂದು ಕೇವಲ ಖಾಲಿ ಡಬ್ಬ ಅಲ್ಲಾಡಿಸಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೊಡಗಿಗೆ ಬೇಕಾಗಿರುವುದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಹಿಂದಿನ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ರೂ. ೧೦೦ ಕೋಟಿಯನ್ನು ತಂದು ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಕ್ರಿಟಿಕಲ್ ಕೇರ್ ಸೆಂಟರ್ ಅನುಮೋದನೆ ಪಡೆದುಕೊಂಡು ಪ್ರಕ್ರಿಯೆಯನ್ನು ನಡೆಸಿದ್ದರು. ಇದೀಗ ನೂತನ ಸರಕಾರ ಗುತ್ತಿಗೆದಾರರ ಜೊತೆ ವ್ಯವಹಾರ ಕುದುರದ ಕಾರಣ ಯೋಜನೆ ಏನಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಗೋಣಿಕೊಪ್ಪ ಗ್ರಾ.ಪಂ. ಪಿಡಿಓ ಬಿಜೆಪಿ ಬೆಂಬಲಿತ ಸದಸ್ಯೆಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಮತ ಹಾಕುವಂತೆ ಆಮಿಷ ಹಾಕಿದ ಘಟನೆ ಸಂಬAಧ ಅಧಿಕಾರಿಗಳಿಗೆ ಕ್ರಮವಹಿಸಲು ನಿರ್ದೇಶಿಸಲಾಗಿದೆ. ಪಿಡಿಓ ವಿರುದ್ಧ ಹಲವು ದೂರುಗಳಿವೆ ಎಂದರು.

ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ಜಿಲ್ಲಾ ಬಿಜೆಪಿ ವಕ್ತಾರರುಗಳಾದ ಸುಬ್ರಮಣ್ಯ ಉಪಾಧ್ಯಯ ಹಾಗೂ ಮಹೇಶ್ ಜೈನಿ ಹಾಜರಿದ್ದರು.