ಪೊನ್ನಂಪೇಟೆ, ಜ. ೨೧: ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಪಂಚಾಯತ್ ರಾಜ್ ಸಂಸ್ಥೆಗಳ ಯೋಜನೆ ಮತ್ತು ಮೇಲ್ವಿಚಾ ರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಕಾರ್ಯಕ್ರಮ ಮತ್ತು ಯೋಜನೆ ಗಳ ಅನುಷ್ಠಾನ, ವಿನೂತನ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊ ಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ಅಧ್ಯಯನ ಪ್ರವಾಸವನ್ನು ಕೈಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪಂಚಾಯತ್ ರಾಜ್ ಸಂಸ್ಥೆಗಳ ೪೨ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಕೊಡವ ಸಾಂಪ್ರದಾಯಕ ವಾಲಗದೊಂದಿಗೆ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಸಭಾಂಗಣಕ್ಕೆ ಕರೆತಂದರು.

ನAತರ ಪಿಪಿಟಿ ಪ್ರದರ್ಶನ ಹಾಗೂ ವಿಡಿಯೋ ಮೂಲಕ ಪಂಚಾಯಿತಿಯ ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಲಾಯಿತು.

ಮಕ್ಕಳ ಗ್ರಾಮ ಸಭೆ, ಅಂಗನವಾಡಿಗಳಿಗೆ ವಿನೂತನ ಪೀಠೋಪಕರಣ ವಿತರಣೆ, ಡಿಜಿಟಲ್ ಆನ್‌ಲೈನ್ ಸೇವೆಗಳ ಬಗ್ಗೆ, ವೈಜ್ಞಾನಿಕವಾಗಿ ಕಸ ವಿಂಗಡಣೆ, ಮುಖ್ಯ ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದ ಸ್ಥಳವನ್ನು ಸಾರ್ವಜನಿಕ ಉದ್ಯಾನವನ್ನಾಗಿ ಮಾರ್ಪಡಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಮ್ಮು- ಕಾಶ್ಮೀರದಲ್ಲಿ ಪಂಚಾಯತ್ ವ್ಯವಸ್ಥೆಯು ಈಗ ಬೆಳವಣಿಗೆಯ ಹಂತದಲ್ಲಿದ್ದು, ಕರ್ನಾಟಕ ರಾಜ್ಯದಷ್ಟು ಅಭಿವೃದ್ಧಿಯನ್ನು ಕಂಡಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿನ ಮಾದರಿಯಲ್ಲಿ, ನಮ್ಮ ರಾಜ್ಯಕ್ಕೆ ಸೂಕ್ತವಾದ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಅಧಿಕಾರಿಗಳ ತಂಡ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಕೆ.ಪಿ.ಎಸ್. ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮಕ್ಕಳ ಸ್ನೇಹಿ ಪಂಚಾಯಿತಿ ಬಗ್ಗೆ ಮಾಹಿತಿ ಪಡೆದು ಗ್ರಂಥಾಲಯ ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಕೆಪಿಎಸ್ ಶಾಲಾ ಆವರಣದಲ್ಲಿ ನಿರ್ಮಿಸಲಾಗಿರುವ ಬಯಲು ಗ್ರಂಥಾಲಯಕ್ಕೆ ಭೇಟಿ ನೀಡಿತು. ಪಂಚಾಯಿತಿಯ ಆವರಣದಲ್ಲಿ ಸ್ವ ಸಹಾಯ ಸಂಘದ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಸ್ಥಳೀಯ ಉತ್ಪನ್ನಗಳಾದ ಜೇನು, ತಿಂಡಿ ತಿನಿಸು, ಕರಕುಶಲ ವಸ್ತುಗಳನ್ನು ವೀಕ್ಷಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ, ಪಿಡಿಓ ಪುಟ್ಟರಾಜು, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಹಾಗೂ ಇನ್ನಿತರರು ಇದ್ದರು. -ಚನ್ನನಾಯಕ