ಶನಿವಾರಸಂತೆ, ಜ. ೨೦: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ತಾ.೨೪ ರಿಂದ ಫೆಬ್ರವರಿ ೧೦ ರವರೆಗೆ ಹದಿನೆಂಟು ದಿನಗಳ ಕಾಲ ನಡೆಯುವ ಜಯದೇವ ಜಾನುವಾರುಗಳ ಜಾತ್ರೆ ಜಿಲ್ಲೆ ಮತ್ತು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.
೧೯೪೫ರಲ್ಲಿ ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಮಠಕ್ಕೆ ಭೇಟಿ ನೀಡಿದ್ದರು. ಇದೇ ಜಾತ್ರಾ ಮೈದಾನದಲ್ಲಿ ಅವರ ನೇತೃತ್ವದಲ್ಲಿ ವೀರಶೈವ ಧರ್ಮ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನದ ನೆನಪಿಗಾಗಿ ಪ್ರತಿ ವರ್ಷ ಇಲ್ಲಿ ಜಾನುವಾರು ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ, ಈ ಜಾತ್ರೆ ‘ಜಯದೇವ ಜಾನುವಾರುಗಳ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದಿದೆ.
೧೯೪೫ರಲ್ಲಿ ಜಾತ್ರಾ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಿ, ಉತ್ಸವವನ್ನು ಆರಂಭಿಸಲಾಯಿತು. ವರ್ಷ ಉರುಳಿದಂತೆ ಜಾತ್ರೆಗೆ ವಿವಿಧೆಡೆಯಿಂದ ಜಾನುವಾರುಗಳು ಬಂದು ಸೇರತೊಡಗಿದವು. ಜಿಲ್ಲೆ ಮಾತ್ರವಲ್ಲದೆ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು, ಗೊರೂರು, ಕಟ್ಟಾಯ, ಮಲ್ಲಿಪಟ್ಟಣ, ಮಗ್ಗೆ ಹಾಗೂ ಮೈಸೂರು ಜಿಲ್ಲೆಯಲ್ಲೂ ಹಸ್ತಪ್ರತಿ ಹಂಚುವ ಮೂಲಕ ಅಧಿಕ ಪ್ರಮಾಣದಲ್ಲಿ ಜಾನುವಾರುಗಳ ವ್ಯಾಪಾರ ನಡೆಯತೊಡಗಿತು. ಅಲ್ಲದೇ, ಅಂಗಡಿ ಹೊಟೇಲ್ಗಳಿಗೂ ಯಾವುದೇ ಸುಂಕ ವಿಧಿಸದೆ ಸಮಿತಿಯ ಸ್ವಂತ ವೆಚ್ಚದಲ್ಲಿ ೧೫ ದಿನಗಳ ಕಾಲ ಜಾತ್ರಾ ಉತ್ಸವ ನಡೆಯುತ್ತದೆ.
ಜಾತ್ರೆಗಾಗಿ ಹಲವಾರು ಮಂದಿ ಶ್ರಮಿಸಿದ್ದು, ಕಿತ್ತೂರಿನ ಕೆ. ಮಲ್ಲಪ್ಪ ಸಚಿವರಾಗಿದ್ದಾಗ ಜಾತ್ರೆ ನಡೆಯುತ್ತಿದ್ದ ಈ ಮೈದಾನವನ್ನು ಜಾತ್ರೆಗಾಗಿಯೇ ಮೀಸಲಿರಿಸಿದರು. ಬಳಿಕ ಶನಿವಾರಸಂತೆಯ ಮಾಜಿ ಪುರಸಭಾಧ್ಯಕ್ಷ ಬಿ. ಗಂಗಪ್ಪ ಕರ್ಕೇರ, ಶಾಂತವೀರಪ್ಪ, ಮಹಾಂತಪ್ಪ, ಚಂದ್ರಶೇಖರ್, ಕಿತ್ತೂರು ವೀರಪ್ಪ, ಹಂಡ್ಲಿಯ ಪುಟ್ಟಣ್ಣ ಮತ್ತಿತರು ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸ್ಥಳೀಯ ಮಂಡಲ ಪಂಚಾಯಿತಿ ಮೂಲಕ ಜಾತ್ರೆ ನಡೆಸಿಕೊಂಡು ಬರಲಾಯಿತು.
ಜಾತ್ರೆಯ ಕೈಂಕರ್ಯ : ಜಾತ್ರೆಯ ಮೊದಲ ದಿನ ಗುಡುಗಳಲೆ ಬಸವೇಶ್ವರ ದೇವಾಲಯದ ನೆರೆ ಬಸವಣ್ಣ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊAದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಶನಿವಾರಸಂತೆ ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖರೊಬ್ಬರು ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಕುಟುಂಬದವರು ಜಾತ್ರಾ ಮೈದಾನದ ದೀಣೆ ಮೇಲೆ ಬಸವೇಶ್ವರ ದೇವರ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಈಗಲೂ ಜಾತ್ರಾ ಮೈದಾನದ ಎರಡೂ ಬದಿಯಲ್ಲಿ ಎರಡು ಬಸವೇಶ್ವರರ ಪುಟ್ಟ ಗುಡಿಗಳಿವೆ. ಜಾತ್ರಾ ಸಮಯದಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ.
(ಮೊದಲ ಪುಟದಿಂದ) ಜಾತ್ರೆಯಲ್ಲಿ ರೈತರು ಬೆಳೆವ ತರಕಾರಿ, ಹಣ್ಣು ಹಂಪಲು, ಗೃಹಕೈಗಾರಿಕೆ ಹಾಗೂ ಗುಡಿ ಕೈಗಾರಿಕೆಯ ವಸ್ತುಗಳು ಪ್ರದರ್ಶನಗೊಳ್ಳುತ್ತವೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಜಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಜೋಡಿ ಎತ್ತುಗಳು ರೂ. ೧೫ ಸಾವಿರದಿಂದ ಒಂದು ಲಕ್ಷಕ್ಕೂ ಬೆಲೆ ಪಡೆದುಕೊಳ್ಳುತ್ತವೆ.
ಜಾತ್ರೆಯ ಗತವೈಭವ ಮರುಕÀಳಿಸದಿದ್ದರೂ ಜನರ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಜಾತ್ರಾ ಸಮಿತಿಯೊಂದಿಗೆ ಜನಪ್ರತಿನಿಧಿಗಳ ಹಾಗೂ ಗ್ರಾಮಸ್ಥರ ಸಹಕಾರವೂ ಅತ್ಯಗತ್ಯವಾಗಿದೆ .
ತಾ.೨೪ ರಂದು ಜಯದೇವ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಅಂದು ಬೆಳಿಗ್ಗೆ ೧೦ ಗಂಟೆಗೆ ಶನಿವಾರಸಂತೆ ಬನ್ನಿ ಮಂಟಪದಿAದ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಹೊರಟು ಗುಡುಗಳಲೆ ಶ್ರೀಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಗುಡುಗಳಲೆ ಜಾತ್ರಾ ಮೈದಾನಕ್ಕೆ ತೆರಳಿ ಸ್ವಾಗತದ ನಂತರ ಅಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.
-ಶ.ಗ.ನಯನತಾರಾ