್ಡ ಅನಿಲ್ ಎಚ್.ಟಿ.
ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ
ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ, ದಿವ್ಯ ಮಂದಿರ ನಾಳೆ ಲೋಕಾರ್ಪಣೆಯಾಗುತ್ತಿರುವ ಸಂಭ್ರಮ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಕಂಡುಬAದಿದೆ. ಕೊನೆಗೂ ಜಯರಾಮನಿಗೆ ದೇವಾಲಯದಲ್ಲಿ ಪೂಜಿಸಲ್ಪಡುವ ಭಾಗ್ಯ ದೊರಕಿತು ಎಂದು ಭಕ್ತರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಇಂಥಹ ಮಂದಿರ ನಿರ್ಮಾಣವಾಗಲು ಸಾವಿರಾರು ಮಂದಿ ಶ್ರಮಿಸಿದ್ದಾರೆ. ಅನೇಕರ ಪ್ರಾರ್ಥನೆ, ಯೋಜನೆಗಳು ಮಂದಿರ ನಿರ್ಮಾಣದ ಹಿನ್ನಲೆಯಲ್ಲಿದೆ. ಇಂಥವರ ಪೈಕಿ ಮರೆಯಲೇಬಾರದವರು ಮಂದಿರಕ್ಕಾಗಿ ಹಗಲಿರುಳೂ ಶ್ರಮವಹಿಸಿ ಶಿಲ್ಪಗಳನ್ನು ಕೆತ್ತಿದ ಶಿಲ್ಪಕಾರರು.
ಈ ಶಿಲ್ಪಕಾರರು ನೂರಾರು ಸುಂದರ ಶಿಲ್ಪಗಳನ್ನು ಕೆತ್ತಿದ ಪರಿಣಾಮವೇ ರಾಮನ ಮಂದಿರ ನಿರೀಕ್ಷೆಗೂ ಮೀರಿ ಸೌಂದರ್ಯ ಪಡೆಯುವಂತಾಗಿದೆ. ಮಂದಿರ ಲೋಕಾರ್ಪಣೆಯಾಗುವ ದಿನಕ್ಕೆ ಕೆಲವೇ ಗಂಟೆಗಳಿರುವAತೆಯೇ ಸಹಜವಾಗಿಯೇ ಇಂಥ ಶಿಲ್ಪಿಗಳ ಮನದಲ್ಲಿಯೂ ಸಮಾಧಾನ, ತೃಪ್ತಿಯ ಜತೆಗೆ ಸಂತೋಷ ಮನೆ ಮಾಡಿದೆ.
ಅಯೋಧ್ಯೆಯಲ್ಲಿರುವ ಮಂದಿರ ನಿರ್ಮಾಣ ಕಾರ್ಯಶಾಲಾ ಎಂಬ ಶಿಲಾಕೆತ್ತನೆ ಕೇಂದ್ರದಲ್ಲಿ ಶಿಲ್ಪ ಕಲಾವಿದರ ಉತ್ಸಾಹ ಉತ್ಸವದಂತೆ ಗೋಚರಿಸುತ್ತಿದೆ.
೩೨ ವರ್ಷಗಳಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯಶಾಲಾ ಕಾರ್ಯಾಚರಿಸುತ್ತಿದೆ. ಸ್ಥಳೀಯವಾಗಿರುವ ನೂರಕ್ಕೂ ಹೆಚ್ಚು ಕೆಲಸಗಾರರು ಇಲ್ಲಿ ವರ್ಷಗಳಿಂದ ಶ್ರೀರಾಮದೇವಾಲಯಕ್ಕೆ ಅಗತ್ಯವಾಗಿ ಬೇಕಾದ ಶಿಲೆಗಳ ಕೆತ್ತನೆಯಲ್ಲಿ ನಿರತರಾಗಿದ್ದಾರೆ.
ಮಂದಿರ ನಿರ್ಮಾಣ ಕಾರ್ಯಶಾಲಾ ಹೆಸರಿನ ಶಿಲಾ ಕೇಂದ್ರವನ್ನು ಪ್ರಾರಂಭಿಸಿದಾಗ ವಿಶ್ವಹಿಂದೂ ಪರಿಷತ್ ಪ್ರಮುಖರಿಗೆ ಕೂಡ ರಾಮಮಂದಿರ ಯಾವಾಗ ನಿರ್ಮಾಣ ಆದೀತು ಎಂದು ಗೊತ್ತಿರಲಿಲ್ಲ. ಹೀಗಾಗಿ ಶಿಲ್ಪಕೆತ್ತನೆಯಲ್ಲಿ ಸಕ್ರಿಯವಾಗಿದ್ದ ಶಿಲ್ಪಿಗಳು, ಕಾರ್ಮಿಕರಿಗೂ ತಾವು ರೂಪುಗೊಳಿಸುತ್ತಿರುವ ಕೆತ್ತನೆ ಯಾವಾಗ ಪ್ರಯೋಜನಕ್ಕೆ ಬಂದೀತು ಎಂದು ತಿಳಿದಿರಲು ಸಾಧ್ಯವೇ ಇರಲಿಲ್ಲ.
ಆದರೂ ನೂರಾರು ಶಿಲ್ಪಿಗಳು ಕಲ್ಲುಕೆತ್ತನೆಯಲ್ಲಿ ಛಳಿ, ಗಾಳಿ, ಬಿಸಿಲು ಮಳೆಯನ್ನೂ ಲೆಕ್ಕಿಸದೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೊಂದು ನಿಸ್ವಾರ್ಥ ಕಾರ್ಯ. ಶಿಲೆಗಳು ರಾಶಿ ರಾಶಿಯಾಗಿ ತಯಾರಾಗುತ್ತಲೇ ಇದ್ದವು. ಎಲ್ಲಿಗೆ, ಯಾವಾಗ ಉಪಯೋಗವಾದೀತು ಎಂಬ ಗೊತ್ತು ಗುರಿಯಿಲ್ಲದೇ ಒಂದಲ್ಲ ಒಂದು ದಿನ ಪ್ರಭು ಶ್ರೀರಾಮನಿಗೆ ಮಂದಿರ ನಿರ್ಮಾಣವಾಗುವ ಸಂದರ್ಭ ಇಲ್ಲಿ ರೂಪಿಸಲಾದ ಶಿಲೆಗಳು ಖಂಡಿತಾ ಬೇಕಾಗುತ್ತದೆ ಎಂಬ ಅಚಲ ವಿಶ್ವಾಸ ಮತ್ತು ಮಂದಿರ ನಿರ್ಮಾಣದ ಸಂಕಲ್ಪ ಈಡೇರುವುದು ಖಂಡಿತಾ ಎಂಬ ಬಲವಾದ ನಂಬಿಕೆಯಿAದಲೇ ಈ ಶಿಲೆಗಳು ನಿರ್ಮಾಣವಾಗುತ್ತಲೇ ಇದ್ದವು.
ಈಗ ಇವರೆಲ್ಲರ ನಂಬಿಕೆ ಈಡೇರುವ ಕಾಲ ಬಂದಿದೆ. ಶಿಲೆಗಳೂ ದೇವಾಲಯದಲ್ಲಿ ಜೀವಂತಿಕೆ ಪಡೆಯುವ ದಿನ ಬಂದೇ ಬಿಟ್ಟಿದೆ. ನೂರಾರು ಶಿಲೆಗಳು ಅಂದವಾಗಿ ರೂಪುಗೊಂಡು ಶ್ರೀರಾಮಮಂದಿರದ ವಿವಿಧ ಕಡೆಗಳಲ್ಲಿ ಅಲಂಕರಿಸಿಕೊಳ್ಳುವ ಹೊತ್ತು ಬಂದಿದೆ.
ಅಯೋಧ್ಯೆಯ ರಾಮ್ಘಾಟ್ನಲ್ಲಿರುವ ಮಂದಿರ ನಿರ್ಮಾಣ ಕಾರ್ಯಶಾಲೆಯ ವಿಶಾಲವಾದ ಜಾಗದಲ್ಲಿ ಶ್ರೀರಾಮಮಂದಿರದ ಪ್ರತಿಕೃತಿ ಇರಿಸಲಾಗಿದೆ. ಇದಕ್ಕೆ ನಮಸ್ಕರಿಸಿ ಮುಂದೆ ಸಾಗಿದರೆ ಇಲ್ಲಿ ಅಯೋಧ್ಯೆಯ ಪ್ರಮುಖ ಸಂತ, ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಮಹಂತ ರಾಮಚಂದ್ರ ಪರಮಹಂಸ ಮತ್ತು ಥಾಕೂರ್ ಗುರುದತ್ ಸಿಂಹ್, ಕೆ.ಕೆ.ನಾಯರ್ ಅವರ ಫೋಟೋಗಳನ್ನು ನೋಡಬಹುದಾಗಿದೆ. ಇಲ್ಲಿಯೇ ಸಾಲುಸಾಲಾಗಿ ಕರಸೇವಕರ ಫೋಟೋಗಳಿದೆ. ಬಾಬರ್ನ ವಿವಾದಿತ ಕಟ್ಟಡದ ಮೇಲೆ ೧೯೯೦ ರಲ್ಲಿ ಹತ್ತಿ ಮೊದಲ ಬಾರಿಗೆ ಬಾಬರ್ ಕಟ್ಟಡದ ಮೇಲೆ ಭಗವಾನ್ ಧ್ವಜ ಹಾರಿಸಿದ ಸಂದರ್ಭ ನಡೆದ ಪೊಲೀಸ್ ಫೈರಿಂಗ್ ನಲ್ಲಿ ಬಲಿಯಾದ ಕರಸೇವಕರ ಫೋಟೋಗಳನ್ನು ಇಲ್ಲಿ ಇರಿಸಿ ಗೌರವ ಸಲ್ಲಿಸಲಾಗಿದೆ. ಹಾಗೇ ವಿವಾದಿತ ಕಟ್ಟಡದ ಅಡಿಯಲ್ಲಿ ಸಿಕ್ಕಿದ ದೇವಾಲಯದ ಪ್ರಾಚೀನ ಶಿಲೆಗಳು, ರಾಮ ಇಲ್ಲಿಯೇ ಇದ್ದ ಎಂಬುದನ್ನು ಉತ್ಖನನ ಸಂದರ್ಭ ಸಾಬೀತುಪಡಿಸಿದ ಸಾಕ್ಷ್ಯರೂಪಿ ಶಿಲೆಗಳು, ತಾಳೆ ಗರಿಗಳನ್ನೂ ದಾಖಲೆಯಾಗಿ ಇರಿಸಲಾಗಿದೆ. ಮಂದಿರ ನಿರ್ಮಾಣ ಹೋರಾಟದಲ್ಲಿ ತೊಡಗಿಸಿಕೊಂಡ ಹಿಂದೂ ಸಂಘಟನೆಗಳ ಪ್ರಮುಖ ನಾಯಕರ ಫೋಟೋಗಳೂ ಕೂಡ ಇಲ್ಲಿ ಕಂಡು ಬರುತ್ತವೆ. ಪ್ರಮುಖವಾಗಿ ಬಾಬರಿ ಕಟ್ಟಡದ ಮೇಲೆ ಹತ್ತಿ ಧ್ವಜವನ್ನು ಹಾರಿಸಿದ ಸಂದರ್ಭ ಪೊಲೀಸರ ಗುಂಡಿಗೆ ಬಲಿಯಾದ ಕೋಲ್ಕಾತ್ತಾದ ಕೋಥಾರಿ ಸಹೋದರರಾದ ರಾಮ್ ಕೋಥಾರಿ ಮತ್ತು ಶರದ್ ಕೋಥಾರಿ ಅವರ ಫೋಟೋ ಮತ್ತು ಮಾಹಿತಿಯನ್ನೂ ಇಲ್ಲಿ ಗಮನಿಸಲು ಸಾಧ್ಯವಿದೆ.
ಇದನ್ನು ನೋಡಿಕೊಂಡು ಮುಂದೆ ಸಾಗಿದರೆ ಇಲ್ಲಿಯೇ ನೂರಾರು ಮಹಿಳೆಯರು ಶ್ವೇತ ಶಿಲೆಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಲ್ಲಿಗೆ ಬರುವ ಕಲ್ಲುಗಳು ಮಲಿನವಾಗಿರುತ್ತವೆ. ಬಣ್ಣ ಕೆಟ್ಟಿರುತ್ತದೆ. ಹೀಗಾಗಿ ಇಂಥ ಕಲ್ಲುಗಳನ್ನು ಸ್ವಚ್ಚಗೊಳಿಸಿದ ಮೇಲೆ ಅವು ಶ್ವೇತ ವರ್ಣದಿಂದ ಕಂಗೊಳಿಸುತ್ತವೆ. ಆ್ಯಸಿಡ್ ಬಳಸಿ ಶಿಲೆಗಳ ಸ್ವಚ್ಚತೆ ಅನಿವಾರ್ಯ.
ಇದನ್ನು ವೀಕ್ಷಿಸಿ ಮುಂದೆ ಸಾಗಿದರೆ ಕಣ್ಣು ಹಾಯಿಸಿದಷ್ಟೂ ಉದ್ದಕ್ಕೆ ನಾನಾ ಶಿಲ್ಪಿಗಳು ವೈವಿಧ್ಯಮಯ ಕೆತ್ತನೆ ಕಾರ್ಯದಲ್ಲಿ ಬಿಡುವಿಲ್ಲದೇ ನಿರತರಾಗಿರುವುದು ಗೋಚರಿಸುತ್ತದೆ. ದೇವಾಲಯ ಸಂಕೀರ್ಣಕ್ಕೆ ಬೇಕಾದ ಶಿಲೆಗಳನ್ನು ಇದೀಗ ಕೆತ್ತಲಾಗುತ್ತಿದ್ದು ಬಹುತೇಕ ಶಿಲಾ ಕೆತ್ತನೆ ಕಾರ್ಯ ಮುಕ್ತಾಯ ಹಂತದಲ್ಲಿದೆ, ಹಲವಾರು ವರ್ಷಗಳ ಹಿಂದೆ ಇಲ್ಲಿ ಕೆತ್ತಲಾಗಿದ್ದ ಶಿಲೆಗಳನ್ನು ಈಗ ನಿರ್ಮಾಣವಾಗಿರುವ ಬಾಲರಾಮನ ಮಂದಿರಕ್ಕೆ ಬಳಸಿಕೊಳ್ಳಲಾಗಿದೆ. ಹೀಗಿದ್ದರೂ ವೈಭವದಿಂದ ರೂಪುಗೊಳ್ಳುತ್ತಿರುವ ರಾಮಮಂದಿರ ಸಂಕೀರ್ಣಕ್ಕೆ ಮತ್ತೆ ಸಾವಿರಾರು ಶಿಲೆಗಳ ಅಗತ್ಯವಿದೆ. ಹೀಗಾಗಿ ಶಿಲಾ ಕೆತ್ತನೆ ಕಾರ್ಯ ಬಿರುಸಿನಿಂದಲೇ ಸಾಗಿದೆ.
ಇಲ್ಲಿ ಕರಕುಶಲ ಕಲೆಯಲ್ಲಿ ನಿರತರಾಗಿರುವ ಶಿಲ್ಪಿಗಳಲ್ಲಿ ಬಹು ತೇಕರು ರಾಜಾಸ್ಥಾನದವರು. ಕಳೆದ ೪-೫ ವರ್ಷಗಳಿಂದ ಅಯೋಧ್ಯೆಯಲ್ಲಿ ಕಾರ್ಮಿಕ ಕುಟೀರಗಳಲ್ಲಿ ವಾಸಿಸುತ್ತಾ ಶಿಲ್ಪ ಕೆತ್ತನೆ, ಸ್ವಚ್ಚತಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
೩೨ ವರ್ಷಗಳ ಮೊದಲು ಇಲ್ಲಿ ಕಾರ್ಯಶಾಲೆ ಪ್ರಾರಂಭಿಸಿದಾಗ ಇದ್ದ ೩ ಎಕ್ರೆ ಜಾಗ ಶಿಲ್ಪ ಕೆತ್ತನೆಗೆ ಸಾಕಾಗುವುದಿಲ್ಲ ಎಂಬ ಕಾರಣದಿಂದ ಇದರ ಪಕ್ಕದಲ್ಲಿಯೇ ೪ ಎಕರೆ ಜಾಗವನ್ನು ಪಡೆದು ಇಲ್ಲಿ ರಾಮಸೇವಕಪುರಂ ಎಂಬ ಹೆಸರಿನಲ್ಲಿ ಶಿಲ್ಪಕೆತ್ತನೆ ಕಾರ್ಯ ಪ್ರಾರಂಭಿಸಲಾಗಿತ್ತು. ಇದೇ ರಾಮಸೇವಕಪುರಂನಲ್ಲಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಾಲರಾಮನನ್ನು ಕೆತ್ತಿದ್ದು ಇದೇ ಶಿಲ್ಪ ಶ್ರೀರಾಮಮಂದಿರದಲ್ಲಿ ಪೂಜೆಗೆ ಆಯ್ಕೆಯಾಗಿದೆ.
ಈ ಎರಡೂ ಶಿಲ್ಪ ಕೆತ್ತನೆ ಕೇಂದ್ರಗಳು ಎರಡು ಕಿ.ಮೀ. ಅಂತರದಲ್ಲಿದ್ದು ಅಯೋಧ್ಯೆಗೆ ಬರುವ ಪ್ರವಾಸಿ ಸಂದರ್ಶಕರು ಇಲ್ಲಿಗೆ ಭೇಟಿ ನೀಡದೇ ರಾಮನೂರಿನ ಭೇಟಿ ಸಮಾಪನವಾಗದು. ಅನೇಕರು ಇಲ್ಲಿಗೆ ಬಂದಾಗ, ನಾವೂ ಕೂಡ ಕರಸೇವೆ ಮಾಡುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗುತ್ತೇವೆ. ನಮ್ಮ ಸೇವೆಯನ್ನೂ ಬಳಸಿಕೊಳ್ಳಿ ಎಂದು ಮನವಿ ಸಲ್ಲಿಸುವುದಿದೆ.
ಇಲ್ಲಿ ಬಳಸಲ್ಪಡುವ ಶಿಲೆಗಳು ಪ್ರಾಚೀನ ಕಾಲದ ಶಿಲೆಗಳಾಗಿದ್ದು ನೇಪಾಳ, ಕೊಲ್ಕೋತ್ತಾಗಳ ಕಾಳಿ ಘಂಡಕಿ ನದಿಬದಿಯಿಂದಲೂ ತರಲಾಗಿದೆ. ರಾಜಾಸ್ಥಾನದಿಂದಲೂ ಟನ್ಗಟ್ಟಲೆ ಶಿಲೆಗಳನ್ನು ತರಲಾಗಿದ್ದು ಅಲ್ಲಿನ ಸರ್ಕಾರ ವಿಳಂಭರಹಿತವಾಗಿ ಮಂದಿರಕ್ಕೆ ಅಗತ್ಯವಾದ ಶಿಲೆಗಳನ್ನು ಕಳುಹಿಸಲು ವ್ಯವಸ್ಥೆ ಮಾಡಿತ್ತು. ಅಂತೆಯೇ ಮಂದಿರ ನಿರ್ಮಾಣಕ್ಕಾಗಿ ಕರ್ನಾಟಕದಿಂದಲೂ ಉತ್ಕ್ಟಷ್ಟ ಶಿಲೆಗಳು ಅಯೋಧ್ಯೆಗೆ ತಲುಪಿವೆ. ದೇಶದ ಹೆಸರಾಂತ ಕಾಮಗಾರಿ ಸಂಸ್ಥೆಯಾದ ಲಾರ್ಸನ್ ಅಂಡ್ ಟರ್ಬೋ ಸಂಸ್ಥೆಯೇ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಕೈಗೊಂಡಿದೆ. ಕಲ್ಲುಕೆತ್ತನೆಗಾಗಿ ಆಧುನಿಕ ಯಂತ್ರಗಳನ್ನು ಬಳಸಲಾಗಿದೆಯಾದರೂ ಅತ್ಯಂತ ಪುಟ್ಟದಾದ ಕೆತ್ತನೆಗಳಿಗೆ ಶಿಲ್ಪಿಗಳ ನೆರವೇ ಅನಿವಾರ್ಯವಾಗಿದೆ.
ಕಳೆದ ೩ ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಶ್ರೀರಾಮಮಂದಿರವನ್ನು ಅಯೋಧ್ಯೆಯಲ್ಲಿಯೇ ನಿರ್ಮಿಸಬಹುದು ಎಂದು ಆದೇಶ ನೀಡಿದ ನಂತರ ಮಂದಿರಕ್ಕೆ ಶಿಲಾನ್ಯಾಸ ನಡೆದ ಕೂಡಲೇ ಈ ಜಾಗದಿಂದ ಹಲವಷ್ಟು ಶಿಲೆಗಳನ್ನು ಮಂದಿರ ನಿರ್ಮಾಣ ನಡೆಯುತ್ತಿರುವ ಹನುಮಾನ್ ಗುಡಿ ಹತ್ತಿರದ ಸ್ಥಳಕ್ಕೇ ಸ್ಥಳಾಂತರ ಮಾಡಲಾಯಿತು. ಶಿಲೆಗಳ ಜತೆಯಲ್ಲಿಯೇ ನೂರಾರು ಶಿಲ್ಪಿಗಳು ಕೂಡ ಮೂಲ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿದರು. ಇದೀಗ ಪೊಲೀಸ್ ಭದ್ರತೆಯ ಸರ್ಪಗಾವಲಿನಲ್ಲಿ ಮಂದಿರ ನಿರ್ಮಾಣ ಸ್ಥಳದಲ್ಲಿ ಶಿಲ್ಪಿಗಳು ಶಿಲಾಕೆತ್ತನೆ ಮುಂದುವರೆಸಿದ್ದಾರೆ. ಶ್ರೀರಾಮನ ಮಂದಿರದ ತಳಪಾಯಕ್ಕೆ ಅಂದಾಜು ೧,೨೦೦ ಬೃಹತ್ ಕಲ್ಲುಗಳನ್ನು ಬಳಸಲಾಗಿದೆ.
ಶಿಲ್ಪಗಳಿಗೆ ಜೀವಂತಿಕೆಯನ್ನು ನೀಡಿದ ನೂರಾರು ಕರಸೇವಕರ ಬೆವರಿನ ಶ್ರಮಕ್ಕೆ ಮೌಲ್ಯ ಲಭಿಸಿದೆ. ಶ್ರೀರಾಮಮಂದಿರದ ಸೌಂದರ್ಯದಲ್ಲಿ ಅನೇಕ ಬಡ ಶಿಲ್ಪಿಗಳ ಕರಕುಶಲ ಕಲೆಯ ಶ್ರೀಮಂತಿಕೆ ಅಡಗಿದೆ.
ದೇವಾಲಯಕ್ಕಾಗಿ ಹಗಲಿರುಳು ತೊಡಗಿಸಿಕೊಂಡು ಅಂದಚAದದ ಶಿಲ್ಪಕಲೆಗಳನ್ನು ರೂಪಿಸಿದ ಶ್ರಮಿಕ ಶಿಲ್ಪಿಗಳಿಗೂ ದೇವಾಲಯದ ನಿರ್ಮಾಣದ ಕೀರ್ತಿ ಸಲ್ಲಲೇಬೇಕು.