ಸೋಮವಾರಪೇಟೆ, ಜ. ೧೯: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಇಲ್ಲಿನ ಜಯವೀರ ಮಾತೆ ದೇವಾಲಯದ ಆಶ್ರಯದಲ್ಲಿ ಬಜೆಗುಂಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರ ಸಂತ ಜೋಸೇಫರ ಚರ್ಚ್ ತಂಡವು ಪ್ರಥಮ ಸ್ಥಾನ ಪಡೆಯಿತು.
ದ್ವಿತೀಯ ಸ್ಥಾನವನ್ನು ಸೆಂಟ್ ಫ್ಲೋರೆನ್ಸ್ ಚರ್ಚ್ ಸಿದ್ದಾಪುರ ಪಡೆಯಿತು. ಥ್ರೋಬಾಲ್ ಪಂದ್ಯಾಟದಲ್ಲಿ ಅಬ್ಬೂರುಕಟ್ಟೆ ಸೆಂಟ್ ಲಾರೆನ್ಸ್ ತಂಡ ಪ್ರಥಮ, ಕುಶಾಲನಗರದ ಸೆಂಟ್ ಸಬಾಸ್ಟಿನ್ ಚರ್ಚ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟದಲ್ಲಿ ನಾಪೋಕ್ಲು ಸೆಂಟ್ ಮೆರೀಸ್ ತಂಡ ಪ್ರಥಮ, ಅಬ್ಬೂರುಕಟ್ಟೆ ಲಾರೆನ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಸಿದ್ದಾಪುರದ ಡೆನ್ನಿ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸಿದ್ದಾಪುರದ ವಿನ್ಸಿ, ಬೆಸ್ಟ್ ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಅಮ್ಮತ್ತಿಯ ಬಿಬಿನ್, ಮ್ಯಾನ್ ಆಫ್ ದ ಸಿರೀಸ್ ಪ್ರಶಸ್ತಿಯನ್ನು ಸಿದ್ದಾಪುರದ ಡೆನ್ನಿ ಪಡೆದುಕೊಂಡರು. ಉತ್ತಮ ತಂಡವಾಗಿ ಸೋಮವಾರಪೇಟೆ ಬಿ ಹಾಗೂ ಅಮ್ಮತ್ತಿ ಎ. ತಂಡಗಳು ಹೊರಹೊಮ್ಮಿದವು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರೋಮನ್ ಕ್ಯಾಥೋಲಿಕ್ ಸಮಿತಿಯ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಪದಾಧಿಕಾರಿಗಳಾದ ವಿ.ಎ. ಲಾರೆನ್ಸ್, ವಿನ್ಸಿ, ಅಂತೋಣಿ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.