ಕುಶಾಲನಗರ, ಜ. ೧೯: ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಕಲುಷಿತ ತ್ಯಾಜ್ಯಗಳು ಚರಂಡಿ ಮೂಲಕ ನದಿಗೆ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಮೈಸೂರು ರಸ್ತೆಯ ಹೆದ್ದಾರಿ ಬದಿಯಲ್ಲಿರುವ ಲಾಡ್ಜ್ಗಳ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಕಟ್ಟಡಗಳಿಂದ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವಾಗಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಮೂಲಕ ಜೆ.ಸಿ.ಬಿ ಯಂತ್ರ ಬಳಸಿ ಹೆದ್ದಾರಿ ಬದಿಯಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಹೊರಬರುವ ತ್ಯಾಜ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಕಟ್ಟಡಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು ಕಲುಷಿತ ತ್ಯಾಜ್ಯಗಳನ್ನು ನೇರವಾಗಿ ಚರಂಡಿಗೆ ಬಿಡುವಂತಿಲ್ಲ. ಪ್ರತಿ ಕಟ್ಟಡಕ್ಕೆ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿ ಶುದ್ಧೀಕರಿಸಿ ನಂತರ ನೀರಿನ ಗುಣಮಟ್ಟವನ್ನು ಪರಿಶೀಲನೆ ಮಾಡುವ ಮೂಲಕ ಚರಂಡಿಗೆ ಹರಿಸುವ ಅವಕಾಶ ಇದೆಯೇ ಹೊರತು ನೇರವಾಗಿ ತ್ಯಾಜ್ಯಗಳನ್ನು ಚರಂಡಿಗೆ ಬಿಡುವಂತಿಲ್ಲ ಎಂದು ಅವರು ಸೂಚನೆ ನೀಡಿದ್ದಾರೆ.
ಕುಶಾಲನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಯೋಜನೆ ಪೂರ್ಣಗೊಂಡ ಬೆನ್ನಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.