ಸುAಟಿಕೊಪ್ಪ, ಜ. ೧೮: ಅಪ್ರಾಪ್ತ ವಯಸ್ಸಿನ ಬಾಲಕಿಯೊಡನೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ನಾಲ್ವರು ಯುವಕರನ್ನು ನಿನ್ನೆ ಸಂಜೆ ಸುಂಟಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಾಲ್ವರು ಯುವಕರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ಆಕೆ ಭಯದಿಂದ ಚೀರಾಡಿದ್ದಾಳೆ. ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಂಟಿಕೊಪ್ಪದ ನಿವಾಸಿಗಳಾದ ಇಗ್ನಿತ್, ಚೇತನ್, ಪ್ರಶಾಂತ್, ದಿನೇಶ್ ಎಂಬವರುಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಪವಾಸ ಸತ್ಯಾಗ್ರಹ : ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಬೇಕೆಂದು ಸಾಮಾಜಿಕ ಪರಿವರ್ತನ ಚಳುವಳಿ ಸಂಘಟನೆ ಆಗ್ರಹಿಸಿದೆ.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಮೋಹನ್ ಮೌರ್ಯ, ವಿದ್ಯಾರ್ಥಿನಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ್ದು, ಈ ಬಗ್ಗೆ ಅರಿವಿದ್ದೆ ಆರೋಪಿಗಳು ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆ ಅನ್ವಯ ದೂರು ದಾಖಲಿಸಿ ಇಂತಹ ಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಾ.೨೨ರಂದು ಎಸ್ಪಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ನಗರ ಸಂಚಾಲಕ ಹೆಚ್.ಎಸ್. ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ತಾಲೂಕು ಅಧ್ಯಕ್ಷ ಜಯರಾಮು ಉಪಸ್ಥಿತರಿದ್ದರು.