ಭಾಗಮಂಡಲ, ಜ. ೧೬: ಕೊಡವರ ಹಾಗೂ ಅಮ್ಮಕೊಡವರ ಶಾಪವಿಮೋಚನೆ ಪರಿಹಾರ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ಸೋಮವಾರ ವಿವಿಧ ಪೂಜೆ ಹಾಗೂ ಹೋಮಗಳನ್ನು ನೆರವೇರಿಸಲಾಯಿತು.
ಶ್ರೀ ಕಾವೇರಮ್ಮೆ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣಪತಿ ಹೋಮ, ಚಂಡಿಕಾಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಕೊಡವ ಜನಾಂಗದವರಿಗಿದ್ದ ಶಾಪ ವಿಮೋಚನೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಯಾಗವನ್ನು ಮಾಡಬೇಕೆಂದು ತಂತ್ರಿಗಳ ಪ್ರಶ್ನೆಯಿಂದ ತಿಳಿದುಬಂದಿತ್ತು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಶ್ರೀ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶತರುದ್ರಾಭಿಷೇಕ ಪಠಣ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗುತ್ತಿದೆ. ೧೦ನೇ ವರ್ಷದ ಯಾಗವನ್ನು ಸೋಮವಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ದೇವಯ್ಯ, ಪ್ರಮುಖರಾದ ಸುಜಾ ಕುಶಾಲಪ್ಪ, ರವಿ ಕಾಳಪ್ಪ, ಮನು ಮುತ್ತಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ರಾಣಿ ಮಾಚಯ್ಯ, ಕಾಳನ ರವಿ, ಗೌಡ ಸಮಾಜದ ಅಧ್ಯಕ್ಷ ಪಳಂಗಪ್ಪ ಉಪಸ್ಥಿತರಿದ್ದರು.