ಮುಳ್ಳೂರು, ಜ. ೧೬: ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ೬೦೦ ವರ್ಷಗಳಷ್ಟು ಇತಿಹಾಸ ಹೊಂದಿರುವ ಹುಲು ಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ತಾ. ೧೭ ರಂದು (ಇಂದು) ಬೆಳಿಗ್ಗೆ ೭ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಹೆಚ್.ಎಂ. ವಿವೇಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ ೭ ಗಂಟೆಗೆ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ದೇವರಿಗೆ ಗಂಗಾಸ್ನಾನ ಮಾಡಿಸುವುದು, ಕಲಶ ತರುವುದು, ಆರತಿ ಎತ್ತುವುದು, ದೇವರಿಗೆ ಈಡುಗಾಯಿ ಒಡೆಯುವುದು ಮುಂತಾದ ಸಾಂಪ್ರದಾಯಕ ವಿಧಿವಿಧಾನಗಳ ಬಳಿಕ ದೇವರನ್ನು ದೇವಸ್ಥಾನದ ಒಳಗೆ ಬರ ಮಾಡಿಕೊಂಡ ನಂತರ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತದೆ. ಮಧ್ಯಾಹ್ನ ೧೨ ಗಂಟೆಗೆ ಪಕ್ಕದ ಕಿತ್ತೂರು ಗ್ರಾಮದಿಂದ ಶ್ರೀ ಕುಮಾರಲಿಂಗೇಶ್ವರ ದೇವರ ಅಡ್ಡಪಲ್ಲಕಿ ಮೆರವಣಿಗೆಯು ಹುಲುಕೋಡು ಗ್ರಾಮಕ್ಕೆ ಆಗಮಿಸುತ್ತದೆ. ಈ ಬಳಿಕ ಹುಲುಕೋಡಿನ ಶ್ರೀ ಕುಮಾರಲಿಂಗೇಶ್ವರ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಮಂಗಳ ವಾದ್ಯಗೋಷ್ಠಿಯೊಂದಿಗೆ ಜಾತ್ರಾ ಬನಕ್ಕೆ ಕರೆತರಲಾಗುತ್ತದೆ. ಜಾತ್ರಾ ಬನದಲ್ಲಿರುವ ಗುಡಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಗೆ ಭಕ್ತಾದಿಗಳಿಂದ ಪೂಜೆ, ಈಡುಗಾಯಿ ಒಡೆಯವುದು ಇನ್ನು ಮುಂತಾದ ಪೂಜಾ ಕಾರ್ಯಗಳು ನಡೆಯುತ್ತವೆೆ. ಸಂಜೆ ೫ ಗಂಟೆವರೆಗೆ ಜಾತ್ರಾ ಬನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ತದ ನಂತರ ಸಂಜೆ ೫ ಗಂಟೆಗೆ ಶ್ರೀ ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಜಾತ್ರಾ ಬನದಿಂದ ತನ್ನ ಮೂಲ ಸ್ಥಾನಕ್ಕೆ ಕರೆತರಲಾಗುತ್ತದೆ. ಸಂಜೆ ೭ ಗಂಟೆಗೆ ಕಿತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಮತ್ತು ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಈ ಸಹೋದರ ದೇವರುಗಳ ಜೋಡಿ ಅಡ್ಡಪಲ್ಲಕ್ಕಿ ಮೆರವಣಿಗೆ ಉತ್ಸವ ಜರುಗುತ್ತದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಹೆಚ್.ಎಂ. ವಿವೇಕ್ ತಿಳಿಸಿದ್ದಾರೆ.