ಗೋಣಿಕೊಪ್ಪ, ಜ. ೧೩: ಗೋಣಿಕೊಪ್ಪದ ಕಾಫಿ ಮಂಡಳಿ ವತಿಯಿಂದ ರೋಬಸ್ಟಾ ಕಾಫಿ ಕೃಷಿಯಲ್ಲಿ ಉತ್ತಮ ಕೊಯ್ಲು ಹಾಗೂ ಕೊಯ್ಲೋತ್ತರ ಪದ್ಧತಿಗಳು ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಕಾನೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಕಾಫಿ ಮಂಡಳಿಯ ಸದಸ್ಯರಾದ ಟಿ.ಎ. ಕಿಶೋರ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಫಿ ಬೆಳೆಗಾರರಿಗೆ ಮಂಡಳಿಯಿAದ ಲಭ್ಯವಿರುವ ವಿವಿಧ ಯೋಜನೆಗಳನ್ನು ಬಳಸಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯಲು ಕಾಫಿ ಉತ್ಪಾದನೆಯಲ್ಲಿ ಗುಣಮಟ್ಟದ ಬಗ್ಗೆ ಜಾಗೃತರಾಗಿರಲು ಸಲಹೆ ನೀಡಿದರು.

ಮಂಡಳಿಯ ಉಪ ನಿರ್ದೇಶಕರಾದ ಡಾ. ಕೆ. ಶ್ರೀದೇವಿ ಅವರು ಬುಡಕಟ್ಟು ಸಮುದಾಯದ ಕಾಫಿ ಬೆಳೆಗಾರರಿಗೆ ದೊರೆಯುವ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಹಾಗೂ ವೀರಾಜಪೇಟೆ ತಾಲೂಕು ಸಮಗ್ರ ಬುಡಕಟ್ಟು ಕಾಫಿ ಅಭಿವೃದ್ಧಿ ಯೋಜನೆಯ ಕುರಿತು ವಿವರಿಸಿದರು. ಹಿರಿಯ ಸಂಪರ್ಕ ಅಧಿಕಾರಿ ವಿ. ಶ್ರೀರಮಣ ಅವರು ನಾಲ್ಕು ರೈತ ಉತ್ಪಾದಕ ಸಂಸ್ಥೆ (ಈPಔ) ಗಳ ಅನುಮೋದಿತ ಕ್ರಿಯಾ ಯೋಜನೆ ಹಾಗೂ ಹಣಕಾಸು ಮಂಜೂರಾತಿ ಕುರಿತು ಮಾಹಿತಿ ನೀಡಿದರು.

ತಾಂತ್ರಿಕ ಅಧಿವೇಶನದಲ್ಲಿ ಮಂಡಳಿಯ ವಿಜ್ಞಾನಿ ಡಾ. ಚೇತನ ಜೆ. ಅವರು ರೋಬಸ್ಟಾ ಕಾಫಿ ಕೊಯ್ಲಿನಲ್ಲಿ ಉತ್ತಮ ಕೃಷಿ ಪದ್ಧತಿ ಹಾಗೂ ಕಾಫಿ ಗುಣಮಟ್ಟದ ಬಗ್ಗೆ ವಿವರಿಸಿದರು. ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ವೀರೇಂದ್ರ ಕುಮಾರ್ ಕಾಳುಮೆಣಸು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ಕೃಷಿ ಪದ್ಧತಿ ಬಗ್ಗೆ ನಿರೂಪಿಸಿದರು.

ಗೋಣಿಕೊಪ್ಪದ ಕಾಫಿ ಮಂಡಳಿಯ ಮಣ್ಣು ಪರೀಕ್ಷೆ ಪ್ರಯೋಗಾಲಯದ ವಿಜ್ಞಾನಿ ಪ್ರಫುಲ್ಲ ಕುಮಾರಿ ಡಿ. ಅವರು ತಮ್ಮ ಕೇಂದ್ರದಲ್ಲಿ ಬೆಳೆಗಾರರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ದಕ್ಷಿಣ ಕೊಡಗು ಪ್ರದೇಶದ ವಿವಿಧ ಭಾಗಗಳಿಂದ ಒಟ್ಟು ೭೩ ಬುಡಕಟ್ಟು ಕಾಫಿ ಬೆಳೆಗಾರರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.ಕಾಫಿ ಮಂಡಳಿ, ದಕ್ಷಿಣ ಕೊಡಗು ಅಧಿಕಾರಿಗಳಾದ ಅಮಿತ ಸ್ವಾಗತಿಸಿ, ಸುನಿಲ್ ಕುಮಾರ್ ಧನ್ಯವಾದ ಅರ್ಪಿಸಿದರು. ಇತರ ಅಧಿಕಾರಿಗಳಾದ ಧನ್ಯ ಜಯರಾಮ್, ಹಫಿತಾ ಮತ್ತು ಶರಣ್ಯ ಮೋಹನದಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.