ಗೋಣಿಕೊಪ್ಪಲು, ಜ.೧೨: ಹಲವು ದಶಕಗಳ ಬೇಡಿಕೆಯಾಗಿದ್ದ ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಬದಿಯಲ್ಲಿ ಹರಿಯುವ ಕೀರೆಹೊಳೆಗೆ ಸೇರುವ ಕೈತೋಡುವಿಗೆ ತಡೆಗೋಡೆ ನಿರ್ಮಾಣ ಹಾಗೂ ಕಿರುಗೂರು ಗ್ರಾ.ಪಂ.ವ್ಯಾಪ್ತಿಯ ಹೊಳೆಗೆ ಸೇತುವೆ ನಿರ್ಮಾಣ ಹಾಗೂ ಕಿಂಡಿ ನೀರಾವರಿ ಯೋಜನೆಗೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಗೋಣಿಕೊಪ್ಪ ಕೈತೋಡು ತಡೆಗೋಡೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರೂ. ೩ ಕೋಟಿ ಅನುದಾನ ಹಾಗೂ ಕಿರುಗೂರು ಗ್ರಾಮದ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಯೋಜನೆಗೆ ರೂ. ೩.೬೫ ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಶಾಸಕರು ವಿಶೇಷ ಆಸಕ್ತಿ ವಹಿಸಿದ್ದರು.
ಇದೀಗ ಎರಡು ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪೊನ್ನಣ್ಣ, ಅವಳಿ ನಗರಗಳಾದ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪದ ಅಭಿವೃದ್ಧಿಯ ದೃಷ್ಟಿಯಿಂದ ಪೊನ್ನಂಪೇಟೆ ಗ್ರಾ.ಪಂ.ಯನ್ನು ಪುರಸಭೆಯನ್ನಾಗಿ ಪರಿವರ್ತಿಸಲು ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮ ಪಂಚಾಯಿತಿ ಸೂಕ್ತ ವ್ಯವಸ್ಥೆಯನ್ನು ಹೊಂದಿದ್ದರೂ, ಅಗತ್ಯ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಅಥವಾ ಪುರಸಭೆಯನ್ನಾಗಿ ಮಾಡಿದಾಗ ಹೆಚ್ಚಿನ ಅನುದಾನ ಬಿಡುಗಡೆ ಯಾಗಲಿದೆ. ಇದರಿಂದ ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಎರಡು ನಗರಗಳು ಅಭಿವೃದ್ಧಿ ಕಾಣಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯುತ್ತಿದೆ ಎಂದರು.
ಕೀರೆ ಹೊಳೆ ಬದಿಗಳಲ್ಲಿ ಮಣ್ಣು ಕುಸಿತದಿಂದ ಸಾಕಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ರೂ. ೯ ಕೋಟಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಮೊದಲ ಹಂತದ ರೂ. ೩ ಕೋಟಿ ಅನುದಾನ ಬಿಡುಗಡೆಯಾಗಿದ್ದು ಉಳಿದ ಅನುದಾನ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಲಭ್ಯವಿರುವ ಅನುದಾನ ಸದ್ಬಳಕೆ ಮಾಡಿಕೊಂಡು ತಡೆಗೋಡೆ ನಿರ್ಮಿಸಲು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೊದಲ ಹಂತವಾಗಿ ಕಾಮಗಾರಿ ನಡೆಯಲಿದೆ ಎಂದರು.
ಈ ವೇಳೆ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಬಾಲು, ಗ್ರಾ.ಪಂ. ಸದಸ್ಯರುಗಳಾದ ಚೈತ್ರಾ ಚೇತನ್, ಬಿ.ಎನ್.ಪ್ರಕಾಶ್, ಮಂಜುಳ, ರತಿ ಅಚ್ಚಪ್ಪ, ಶರತ್ ಕಾಂತ್, ಕುಲ್ಲಚಂಡ ಗಣಪತಿ, ವಿವೇಕ್ ರಾಯ್ಕರ್, ಧ್ಯಾನ್ ಸುಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹಿರಿಯ ಮುಖಂಡ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಸಹಾಯಕ ಇಂಜಿನಿಯರ್ ಅರುಣ್, ಗುತ್ತಿಗೆದಾರರುಗಳಾದ ದೇವರಾಜ್, ದಿನೇಶ್, ಪಕ್ಷದ ಪ್ರಮುಖರುಗಾಳಾದ ಟಾಟು ಮೊಣ್ಣಪ್ಪ, ಅರವಿಂದ್ ಕುಟ್ಟಪ್ಪ, ಶಿವಾಜಿ, ವಿ.ಟಿ. ವಾಸು, ರಾಜಶೇಖರ್, ಸಿ.ಡಿ ಮಾದಪ್ಪ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ಉಪಸ್ಥಿತರಿದ್ದರು.
ಕಿರುಗೂರು ಭೂಮಿ ಪೂಜೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ, ಗ್ರಾ.ಪಂ.ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸರಚಂಗಪ್ಪ, ಚೆಪ್ಪುಡೀರ ಕಿರಣ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.