ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನ ಬಂಧನ

ಮಡಿಕೇರಿ, ಜ. ೧೩ : ಪಿಕಪ್ ವಾಹನ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಚಿಂತಾಜನಕ ಸ್ಥಿತಿಗೆ ತಲುಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕನೋರ್ವ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ದ ಆಟೋ ಚಾಲಕ ಸುನೀಲ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಅಪಘಾತ ಸಂಭವಿಸಿದ್ದು, ತಕ್ಷಣವೇ ಪಿಕಪ್ ವಾಹನದ ಚಾಲಕ ಗಾಳಿಬೀಡಿನ ನಿವಾಸಿ ಮಡಿಕೇರಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಮೋಕ್ಷಿತ್ ಎಂಬಾತನನ್ನು ಬಂಧಿಸಿರುವ ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.