ಸೋಮವಾರಪೇಟೆ, ಜ. ೧೧: ಪಟ್ಟಣದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿಗಳಿದ್ದ ಬಸ್‌ಗೆ ಆನೆಚೌಕೂರು-ತಿತಿಮತಿ ಮಾರ್ಗಮಧ್ಯೆ ಕಾಡಾನೆಯೊಂದು ಅಡ್ಡಲಾಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಮೊನ್ನೆ ರಾತ್ರಿ ನಡೆದಿದೆ.

ಪಟ್ಟಣದ ಎಂಎಸ್‌ಐಎಲ್ ಉದ್ಯೋಗಿ ಸುಜಿತ್, ಮೆಕ್ಯಾನಿಕ್ ಅರುಣ್ ಅವರುಗಳ ನೇತೃತ್ವದಲ್ಲಿ ‘ತತ್ವಮಸಿ’ ತಂಡದ ೨೮ ಮಂದಿ ವ್ರತಧಾರಿಗಳು ಪಟ್ಟಣದಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ರಾತ್ರಿ ೧೧.೧೫ರ ಸುಮಾರಿಗೆ ಆನೆಚೌಕೂರು ಮಾರ್ಗವಾಗಿ ತಿತಿಮತಿಗೆ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಕಾಡಾನೆ ಗೋಚರಿಸಿದೆ.

ಸುಮಾರು ೨೦ ಮೀಟರ್ ಅಂತರದಲ್ಲಿ ಚಾಲಕ ಬಸ್ಸನ್ನು ನಿಲುಗಡೆಗೊಳಿಸಿದ್ದಾರೆ. ಈ ಸಂದರ್ಭ ಎದುರಿಗೆ ಬಂದ ಕಾಡಾನೆ, ಬಸ್‌ನ ಮುಂಭಾಗ ಅಳವಡಿಸಿದ್ದ ಅಯ್ಯಪ್ಪ ಸ್ವಾಮಿಯ ಫೋಟೋಗೆ ಹಾಕಲಾಗಿದ್ದ ಹೂವಿನ ಹಾರಗಳನ್ನು ಸೊಂಡಿಲಿನಿAದ ತೆಗೆದು ಮೈಮೇಲೆ ಹಾಕಿಕೊಂಡಿದೆ.

‘ಕಾಡಾನೆ ಪ್ರತ್ಯಕ್ಷವಾದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು. ಕೆಲ ನಿಮಿಷಗಳ ಕಾಲ ಬಸ್‌ನ ಮುಂಭಾಗವೇ ಇದ್ದ ಕಾಡಾನೆ, ಹೂವುಗಳನ್ನು ತೆಗೆದು ಮೈಮೇಲೆ ಹಾಕಿಕೊಳ್ಳುತ್ತಿತ್ತು. ಬಸ್ ಹಾಗೂ ಪ್ರಯಾಣಿಕರಿಗೆ ಯಾವುದೇ ಅಪಾಯ ಮಾಡಲಿಲ್ಲ. ಕಾಡಾನೆ ರಸ್ತೆ ಬದಿಗೆ ತೆರಳಿದ ನಂತರ ನಾವುಗಳು ಬಸ್ ಮುಂದಕ್ಕೆ ಚಲಾಯಿಸಿದೆವು’ ಎಂದು ಬಸ್‌ನಲ್ಲಿದ್ದ ಸುಜಿತ್ ತಿಳಿಸಿದ್ದಾರೆ.