ಮಡಿಕೇರಿ, ಜ. ೧೧: ಬೆಂಗಳೂರಿನ ಆರ್.ಎ.ಮಂಡುಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ ರಾಜ್ಯಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿ ಎಚ್.ಆರ್. ಪಲ್ಲವಿ ಅವರು ೪೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಮತ್ತು ೧೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಆಗಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವೈ.ಎನ್. ಕವನ್ ಕುಮಾರ್ ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಯಿಂದ ೪ ಮಂದಿ ಗೃಹರಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಜ್ಯಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಜಯ ಸಾಧಿಸಿದ್ದಾರೆ.

ಎ.ಪಿ.ಜಯಕುಮಾರ್ ಅವರು ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ತರಬೇತಿ ಅಕಾಡೆಮಿಯಲ್ಲಿ ನಡೆದ ಅಡ್ವಾನ್ಸ್ ಪೈರ್ ಪೈಟಿಂಗ್ ತರಬೇತಿಯಲ್ಲಿ ಒಟ್ಟು ೬೦ ಗೃಹರಕ್ಷಕರಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಮತ್ತು ಗೃಹರಕ್ಷಕ ಅಧಿಕಾರಿಗಳ ತರಬೇತಿಯಲ್ಲಿ ದ್ವೀತೀಯ ಸ್ಥಾನ ಪಡೆದಿರುತ್ತಾರೆ. ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶೀಕ ತರಬೇತಿ ಕೇಂದ್ರ ದೇವರಬೆಳಕೆರೆ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದು ಕೊಡಗು ಜಿಲ್ಲೆಗೆ ಹೆಸರು ತಂದಿದ್ದಾರೆ.

ಈ ಸಂಬAಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹರಕ್ಷಕ ದಳದ ಸಮಾದೇಷ್ಟರಾದ ಕೆ.ಎಸ್.ಸುಂದರರಾಜ್ ಅವರು ಕ್ರೀಡಾಪಟುಗಳನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಗೃಹರಕ್ಷಕ ದಳದ ಜಿಲ್ಲಾ ಬೋಧಕ ಡಿ.ಅಕ್ಷಯ್ ಕುಮಾರ್, ಎಂ.ವಿಶ್ವನಾಥ, ವಿ.ಜಿ.ನಿರ್ಮಲಾ, ಮಡಿಕೇರಿ ಘಟಕಾಧಿಕಾರಿ ವೈ.ಎನ್.ಕವನ್‌ಕುಮಾರ್ ಹಾಗೂ ಗೃಹರಕ್ಷಕ ವಿಭಾಗದ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕ ಸಿಬ್ಬಂದಿಗಳು ಇದ್ದರು.