ಸಿದ್ದಾಪುರ, ಜ. ೧೧: ಶಾಲಾ ಮಕ್ಕಳನ್ನು ಕರೆತರುತ್ತಿದ್ದ ವಾಹನ ಬಂಡೆಕಲ್ಲಿಗೆ ಅಪ್ಪಳಿಸಿದ ಪರಿಣಾಮ ೧೧ ಪುಟ್ಟ ಮಕ್ಕಳಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿರುವ ಮಾರ್‌ನಿಂಗ್ ಗ್ಲೋರಿ ಎಂಬ ಪ್ರಾಥಮಿಕ ಶಾಲೆಯಿಂದ ಪುಟ್ಟ ಮಕ್ಕಳನ್ನು ಸಂಜೆ ಮನೆಗೆ ಕರೆತರುತ್ತಿದ್ದ ಸಂದರ್ಭದಲ್ಲಿ ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ತೂಪನಕೊಲ್ಲಿ ಎಸ್ಟೇಟ್‌ನ ಬಳಿ ವಾಹನ ಅವಘಡವಾಗಿದೆ. ಮಾರುತಿ ಇಕೋ ವಾಹನ ಚಾಲಕನಾಗಿರುವ ಖಾಲೀದ್ ಎಂಬಾತನು ಎಂದಿನAತೆ ಕರಡಿಗೋಡುವಿನಿಂದ ಸಿದ್ದಾಪುರ ಹಾಗೂ ಬಾಡಗ ಬಾಣಂಗಾಲ ಗ್ರಾಮದ ಬಜೆಕೊಲ್ಲಿಗೆ ತನ್ನ ವಾಹನದಲ್ಲಿ ಮಕ್ಕಳನ್ನು ಕರೆತರುತ್ತಿದ್ದನು.

ಗುರುವಾರದಂದು ಶಾಲೆ ಬಿಟ್ಟು ಸಂಜೆ ಅಂದಾಜು ೪ ಗಂಟೆಗೆ ಬಜೆಕೊಲ್ಲಿಗೆ ಮಕ್ಕಳನ್ನು ಬಿಟ್ಟು ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ಬಾಡಗ ಬಾಣಂಗಾಲ ಗ್ರಾಮದ ತೂಪನಕೊಲ್ಲಿ ಬಳಿ ರಸ್ತೆಯ ಬದಿಯಲ್ಲಿದ್ದ ಬಂಡೆಕಲ್ಲಿಗೆ ವಾಹನ ಅಪ್ಪಳಿಸಿದೆ.

ವಾಹನದಲ್ಲಿದ್ದ ೪ ವರ್ಷ ಪ್ರಾಯದ ೧೧ ಪುಟ್ಟ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಪೈಕಿ ೩ ಮಕ್ಕಳಿಗೆ ಹೆಚ್ಚಿನ ಗಾಯವಾಗಿರುತ್ತದೆ. ಗಾಯಾಳು ಮಕ್ಕಳಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಮಿತಿಗಿಂತ ಹೆಚ್ಚಿಗೆ ಮಕ್ಕಳನ್ನು ಕರೆದೊಯ್ಯುವ ಬಗ್ಗೆ ವ್ಯಾನ್ ಚಾಲಕ ಖಾಲೀದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಉತ್ತಯ್ಯ ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯರ ಆಕ್ರೋಶ

ಪುಟ್ಟ ಮಕ್ಕಳನ್ನು ಕರೆತರುವ ವಾಹನದಲ್ಲಿ ಮಿತಿಮೀರಿದ ಮಕ್ಕಳನ್ನು ಕುರಿಗಳಂತೆ ತುಂಬಿಸಿಕೊAಡು ಬರಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬಂದಿತು. ಶಾಲೆ ಮಕ್ಕಳನ್ನು ಕರೆತರುವ ವಾಹನಗಳ ಕಾನೂನು ಪಾಲನೆಯನ್ನು ಕೆಲವು ವಾಹನ ಚಾಲಕರು ಮಾಡುತ್ತಿಲ್ಲ. ಬಿಳಿ ಬಣ್ಣದ ವಾಹನಗಳಲ್ಲಿ ಅಧಿಕ ಮಕ್ಕಳನ್ನು ಕರೆತರಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - ವರದಿ : ವಾಸು ಎ.ಎನ್.