ಮಡಿಕೇರಿ, ಜ. ೧೧ : ಜಿಲ್ಲೆಯಲ್ಲಿ ಕೈಮಗ್ಗ ಚಟುವಟಿಕೆ ಕುಂಠಿತವಾಗುತ್ತಿದ್ದು, ಅದರ ಪುನಶ್ಚೇತನಕ್ಕೆ ಇಲಾಖೆ ಬದ್ಧವಾಗಿರುವುದಾಗಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖಾ ಜಂಟಿ ನಿರ್ದೇಶಕ ಗುರುಸ್ವಾಮಿ ಹೇಳಿದರು.

ಮಡಿಕೇರಿಯಲ್ಲಿ ಹತ್ತು ದಿನದ (ಇಂದು ಕೊನೆ) ಕೈಮಗ್ಗ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿರುವ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ೨೦೨೫ರ ಜನವರಿಯೊಳಗೆ ಹತ್ತು ಕೈಮಗ್ಗ ಕೇಂದ್ರದ ಸ್ಥಾಪನೆಗೆ ಉದ್ದೇಶಿಸಿರುವುದಾಗಿ ಹೇಳಿದರು. ಈಗಾಗಲೇ ಮೂವತ್ತು ಮಂದಿಗೆ ತರಬೇತಿ ನೀಡಲಾಗಿದ್ದು, ಶಿರಂಗಾಲದಲ್ಲಿ ಮತ್ತೆ ಮೂವತ್ತು ಮಂದಿಗೆ ತಾ. ೧೪ ರಿಂದ ತರಬೇತಿ ಆರಂಭಿಸಲಾಗುತ್ತಿದೆ.

ಪ್ರಸ್ತುತ ಪೊನ್ನಂಪೇಟೆಯಲ್ಲಿ ಕೈಮಗ್ಗ ಹಾಗೂ ವಿದ್ಯುತ್ ಚಾಲಿತ ಮಗ್ಗದ ಕೇಂದ್ರವಿದೆ. ಹೆಬ್ಬಾಲೆಯಲ್ಲಿ ಕೈಮಗ್ಗ ಕೇಂದ್ರ ಚಾಲ್ತಿಯಲ್ಲಿದೆ. ರಾಜ್ಯಪ್ರಶಸ್ತಿ ವಿಜೇತ, ಬೆಂಗಳೂರಿನ ನೇಕಾರ ನಾಗರಾಜ್ ಅವರು ತರಬೇತಿ ನೀಡುತ್ತಿದ್ದಾರೆ. ನಾಗರಾಜ್ ಅವರನ್ನು ಕೇಂದ್ರ ಸರಕಾರ ತರಬೇತಿಗೆ ನಿಯೋಜಿಸಿದೆ. ೨೦೨೨ರಲ್ಲಿ ನಡೆದ ರಾಜ್ಯ ನೇಕಾರರ ಸ್ಪರ್ಧೆಯಲ್ಲಿ ನಾಗರಾಜ್ ಪ್ರಶಸ್ತಿ ಗಳಿಸಿದ್ದರು. ಅವರು ಇಲ್ಲಿನ ಪ್ರದರ್ಶನದಲ್ಲಿ ಭಾಗವಹಿಸಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ತಾವೇ ನೇಯ್ದಿರುವ ಕೈಮಗ್ಗವನ್ನು ಪ್ರದರ್ಶಿಸಿದರು.

ಕೈಮಗ್ಗವು ಅವನತಿಯತ್ತ ಸಾಗುತ್ತಿದ್ದು, ಬೆಂಗಳೂರಿನಲ್ಲಿ ಈ ಹಿಂದೆ ೫ ಸಾವಿರ ಕೈಮಗ್ಗ ಇದ್ದದು ಈಗ ೨೦೦ಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಕೈಮಗ್ಗದಿಂದ ಹತ್ತಿ ಹಾಗೂ ರೇಷ್ಮೆಯ ಸುಂದರ ಸೀರೆಗಳನ್ನು ತಯಾರು ಮಾಡುತ್ತಿರುವುದಾಗಿ ಹೇಳಿದ ಅವರು, ಒಂದು ಸೀರೆ ತಯಾರು ಮಾಡಲು ಸುಮಾರು ೧೯ ಸಾವಿರ ಬಾರಿ ಕಾಲಲ್ಲಿ ತುಳಿಯಬೇಕಾಗುತ್ತದೆ ಎಂದರು. ಒಂದು ಇಂಚು ಸೀರೆಗೆ ೮೦ ನೂಲು ಸೇರಬೇಕು, ೮೫ ಬಾರಿ ಯಂತ್ರವನ್ನು ತುಳಿಯಬೇಕು. ವಾರಕ್ಕೆ ಎರಡು ಅಥವಾ ಮೂರು ಸೀರೆಯನ್ನಷ್ಟೇ ತಯಾ ರಿಸಲು ಸಾಧ್ಯ ಎಂದು ನಾಗರಾಜ್ ವಿವರಿಸಿದರು. - ಅನಂತ್