ಸೋಮವಾರಪೇಟೆ, ಜ. ೩: ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಸೇರಿದಂತೆ ೫೩ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರವೇ ತಾಲೂಕು ಘಟಕದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು, ಕನ್ನಡಪರ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದು ಖಂಡನೀಯ. ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡಕ್ಕೆ ಶೇ.೬೦ ಆದ್ಯತೆ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಎಲ್ಲೂ ಸಹ ಪಾಲನೆಯಾಗುತ್ತಿಲ್ಲ. ಇದರ ವಿರುದ್ಧ ಹೋರಾಟ ಮಾಡಿದ ಹೋರಾಟ ಗಾರರ ಬಂಧನ ಖಂಡನೀಯ ಎಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ರಾಜ್ಯಾಧ್ಯಕ್ಷರ ಸಹಿತ ೫೩ ಹೋರಾಟಗಾರರನ್ನು ಬಿಡುಗಡೆ ಗೊಳಿಸಬೇಕು. ಮೊಕದ್ದಮೆಗಳನ್ನು ಖುಲಾಸೆಗೊಳಿಸಬೇಕೆಂದು ಆಗ್ರಹಿಸುವ ಮನವಿಪತ್ರವನ್ನು ಶಿರಸ್ತೇದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭ ಕರವೇ ನಗರಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ದಾಮೋಧರ್, ದೇವೇಂದ್ರ, ರಮೇಶ್, ಸುಮತಿ, ಶಶಿಕುಮಾರ್, ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.