ವೀರಾಜಪೇಟೆ, ಜ. ೧: ಸರಕಾರದ ಅನುದಾನದಲ್ಲಿ ನಡೆಯುವ ಸಾರ್ವಜನಿಕ ಕಾಮಗಾರಿಗಳು ಕಳಪೆಯಾಗದಂತೆ ಗುಣಮಟ್ಟದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ನಗರದ ಛತ್ರಕೆರೆ ಬಳಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಲೋಕೋಪಯೋಗಿ ಇಲಾಖೆ ವತಿಯಿಂದ ೬.೩೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಶಾಸಕ ಪೊನ್ನಣ್ಣ ಬಳಿಕ ಮಾತನಾಡಿ ಸಾರ್ವಜನಿಕರ ಹಣದಿಂದ ನಡೆಯುವ ಕಾಮಗಾರಿ ವಿಚಾರದಲ್ಲಿ ರಾಜಿ ಇಲ್ಲ. ಯಾವುದೇ ಕಾರಣಕ್ಕೂ ಹಣ ದುರುಪಯೋಗ ಆಗದಂತೆ ಗುತ್ತಿಗೆದಾರರು ೧೧ ತಿಂಗಳ ನಿಗದಿತ ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಮುಗಿಸಿಕೊಡಬೇಕು. ವಿದ್ಯಾರ್ಥಿ ನಿಲಯ ೧೧ ಕೊಠಡಿಗಳನ್ನೊಳಗೊಂಡು, ೩ ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರಕುವಂತಾಗಲಿ ಎಂದರು.
ಭೂಮಿ ಪೂಜೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಎಂ. ಸುಜಾ ಕುಶಾಲಪ್ಪ, ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ, ಲೋಕೋಪಯೋಗಿ ಇಲಾಖೆಯ ಸಿದ್ದೇಗೌಡ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶೇಖರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರೀತಿ ಚಿಕ್ಕಮಾದಯ್ಯ, ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಚಂದ್ರ ಕುಮಾರ್, ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಆಶಾ ಸುಬ್ಬಯ್ಯ, ಮಹಮ್ಮದ್ ರಾಫಿ, ರಜನಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.