*ಗೋಣಿಕೊಪ್ಪ, ಜ.೧: ಸಮಯವನ್ನು ಸದುಪಯೋಗಪಡಿಸಿ ಕೊಂಡು ಉತ್ತಮ ಶಿಕ್ಷಣ ಪಡೆದು ಸುಖ-ಸಮೃದ್ಧ ಸಮಾಜವನ್ನು ನಿರ್ಮಿಸಿ ಎಂದು ವಿದ್ಯಾರ್ಥಿಗಳಿಗೆ ವೈದ್ಯ ಡಾ. ಕಾಳಿಮಾಡ ಶಿವಪ್ಪ ಸಲಹೆ ನೀಡಿದರು.
ಶ್ರೀಮಂಗಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸತ್ಸಂಗ ಬೆಳೆಸಿಕೊಂಡು ಸದೃಢ ದೇಹ ಮತ್ತು ಸದೃಢ ಮನಸ್ಸು ಗಳಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆಡಳಿತ ಮಂಡಳಿಯ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ದತ್ತಿನಿಧಿ ಬಹುಮಾನ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಕಾಳಿಮಾಡ ಪದ್ಮ ಬೆಳ್ಯಪ್ಪ, ಖಜಾಂಚಿ ಎಸ್.ಎಂ. ವಿನಯ್, ನಿರ್ದೇಶಕರು ಗಳಾದ ಚಿಮ್ಮಂಗಡ ಗಣಪತಿ, ಅಜ್ಜಾಮಾಡ ಸಾವಿತ್ರಿ, ಅಯ್ಯಮಾಡ ಉದಯ್, ಚೆಟ್ಟಂಗಡ ಕಾರ್ಯಪ್ಪ, ಬಾಚಂಗಡ ಕಾರ್ಯಪ್ಪ, ಅಣ್ಣಳಮಾಡ ನರೇಂದ್ರ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರತ್ನಮ್ಮ, ಕಾಲೇಜಿನ ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ, ಇದ್ದರು.