ಕುಶಾಲನಗರ, ಡಿ. ೨೭ : ಭಗವದ್ಗೀತೆ ವಾಹನಗಳ ಜಿಪಿಎಸ್ ಮಾರ್ಗಸೂಚಿಯಂತೆ ಸುಂದರ ಜೀವನದ ದಿಕ್ಸೂಚಿ ವ್ಯವಸ್ಥೆಯಾಗಿದ್ದು ಪ್ರತಿಯೊಬ್ಬರನ್ನು ಸರಿಯಾದ ಗುರಿ ಮುಟ್ಟಿಸಲು ದಾರಿ ದೀಪವಾಗಿದೆ ಎಂದು ಉಡುಪಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅವರು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಕಾರ್ಯಕ್ರಮದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಎಲ್ಲಾ ಕಾಲಕ್ಕೂ ಮನುಕುಲದ ಒಳಿತಿಗಾಗಿ ಶ್ರೀ ಕೃಷ್ಣ ಬೋಧಿಸಿರುವ ಭಗವದ್ಗೀತೆ ಜಾಗತಿಕ ಹಾಗೂ ಜಾತ್ಯತೀತ ಗ್ರಂಥವೆAದು ವಿಶ್ಲೇಷಿಸಿದರು.
ತಾವು ಮಾಡುವ ಯಾವುದೇ ವೃತ್ತಿಯಲ್ಲಿ ಅಥವಾ ಜೀವನದಲ್ಲಿ ತೃಪ್ತಿ ಇಲ್ಲದೆ ಗೊಂದಲದಲ್ಲಿ ಸಿಲುಕಿರುವ ವೇಳೆ ಮನ ಶಾಂತಿಗಾಗಿ ಭಗವದ್ಗೀತೆ ಗ್ರಂಥ ಅಧ್ಯಯನ ಪ್ರಚಾರ ಹಾಗೂ ಬರವಣಿಗೆ ಸ್ವಯಂ ತೃಪ್ತಿ ತಂದುಕೊಡಲಿದೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.
ದೇಶ ವಿದೇಶಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಯುತ್ತಿದ್ದು ಹಿಂದೂಯೇತರ ದೇಶವಾದ ಸಿಂಗಾಪುರದಲ್ಲಿ ಭಗವದ್ಗೀತೆ ಅಭಿಯಾನಕ್ಕೆ ತನ್ನನ್ನು ಆಹ್ವಾನಿಸಿರುವ ಬಗ್ಗೆ ಶ್ರೀಗಳು ಮಾಹಿತಿ ನೀಡಿದರಲ್ಲದೆ ಭಗವದ್ಗೀತೆ
(ಮೊದಲ ಪುಟದಿಂದ) ಕೇವಲ ಹಿಂದೂಗಳಿಗೆ ಸೀಮಿತವಾದ ಗ್ರಂಥವಲ್ಲ ಎಂದರು. ವಿಶ್ವದಲ್ಲಿ ಗರಿಷ್ಠ ವ್ಯಾಖ್ಯಾನ ಹೊಂದಿರುವ ಗ್ರಂಥ ಭಗವದ್ಗೀತೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಾತಿ, ಧರ್ಮ, ಬೇಧವಿಲ್ಲದ ಜಾಗತಿಕ ಗ್ರಂಥವಾದ ಭಗವದ್ಗೀತೆ ಜಗತ್ತಿಗೆ ಸತ್ಯವನ್ನೇ ತೋರಿಸಿದೆ. ವಿಶ್ವದಲ್ಲಿ ಎಲ್ಲಾ ಮತ ಧರ್ಮಗಳು ಒಪ್ಪಿಕೊಂಡ ಶ್ರೀಕೃಷ್ಣನಿಗೆ ಅತಿ ಪ್ರಿಯವಾದ ಮಹಾ ಗ್ರಂಥವಾದ ಭಗವದ್ಗೀತೆ ಮಾನವ ಕುಲಕ್ಕೆ ಒಳ್ಳೆಯದನ್ನೇ ಬಯಸಿದೆ ಎಂದರು.
ಪ್ರತಿಯೊಬ್ಬರೂ ಜೀವನದ ಉದ್ದೇಶ ಅರಿತು ಬಾಳಬೇಕು. ಶ್ರೀ ಕೃಷ್ಣ ಅಂದರೆ ಭಕ್ತರಿಗೆ ವಿಶ್ವ ಬ್ಯಾಂಕ್ ಇದ್ದಂತೆ. ದೇವರಿಗೆ ಅರ್ಪಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಭಕ್ತಿ ಪ್ರೀತಿ ಸೇವೆ ವಿವಿಧ ರೂಪದಲ್ಲಿ ಅದನ್ನು ಭಗವಂತನಿಗೆ ಹಿಂತಿರುಗಿಸಬಹುದು. ಕೃಷ್ಣನ ಆರಾಧನೆ ಮೂಲಕ ಅನಂತ ಫಲ ಲಭಿಸಲು ಸಾಧ್ಯ ಎಂದ ಶ್ರೀಗಳು, ಭಕ್ತಿ ಸಂಪಾದನೆ ಯಾವುದೇ ಸಂದರ್ಭ ಕಳುವಾಗಲ್ಲ. ಜೀವನವನ್ನು ದೇವರಿಗೆ ಮೀಸಲಿರಿಸಬೇಕು ಎಂದರು.
ಗೀತೆಯ ಓದಿನ ಜೊತೆಗೆ ಬರವಣಿಗೆ ಲೇಖನ ಮೂಲಕ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಬೇಕಾಗಿದೆ. ತಮ್ಮ ಉದ್ಧಾರದ ಬಾಗಿಲನ್ನು ತಾವೇ ತೆರೆದುಕೊಳ್ಳಬೇಕು. ಈ ಅಭಿಯಾನದ ಮೂಲಕ ಭಗವದ್ಗೀತೆ ಪ್ರತಿಯೊಬ್ಬರ ಮನೆಯ ಪೂಜಾ ಕೊಠಡಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಭಗವದ್ಗೀತೆಯ ಬಗ್ಗೆ ಬೆಳಕು ಚೆಲ್ಲುವ ಕಾಯಕ ಕೋಟಿಗೀತಾ ಲೇಖನ ಯಜ್ಞ ಯಶಸ್ವಿ ದಾರಿಯಲ್ಲಿ ಸಾಗುತ್ತಿದ್ದು ಜನತೆಯ ಸಂಕಲ್ಪ ಈಡೇರಲು ತನ್ನ ಆಶೀರ್ವಾದ ಇದೆ ಎಂದರು. ಕೊಡಗು ಜಿಲ್ಲೆಯ ಕುಶಾಲನಗರದ ಜನರು ಒಬ್ಬರ ಮೂಲಕ ೧೦ ಜನರನ್ನು ಭಗವದ್ಗೀತಾ ಯಜ್ಞ ದೀಕ್ಷೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ನೀಡಿದ ಶ್ರೀಗಳು ಬೆಳಿಗ್ಗೆ ಸ್ನಾನ ಪೂಜೆ ನಂತರ ಪ್ರಾರ್ಥನಾ ಶ್ಲೋಕದೊಂದಿಗೆ ಗೀತೆ ಬರೆಯುವ ಬಗ್ಗೆ ಯಜ್ಞಾರ್ಥಿಗಳಿಗೆ ಮಾಹಿತಿ ನೀಡಿದರು.
ಸಾಕ್ಷಾತ್ ಶ್ರೀ ಮಧ್ವಾಚಾರ್ಯರೇ ಶ್ರೀ ಮಧುಪೇಂದ್ರ ತೀರ್ಥ ಪೀಠದ ಮೂಲ ಯತಿಗಳಿಗೆ ಕರುಣಿಸಿದ ಸುಮಾರು ೭೦೦ಕ್ಕೂ ಅಧಿಕ ವರ್ಷಗಳ ಪುರಾತನವಾದ ಪಟ್ಟದ ದೇವರಾಗಿದ್ದುಕೊಂಡು ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬಂದ ಶ್ರೀ ರುಕ್ಮಿಣಿ, ಸತ್ಯಭಾಮ ಸಹಿತ ಶ್ರೀ ವೀರ ವಿಠಲ ಸಪರಿವಾರ ದೇವರಿಗೆ ಶ್ರೀಗಳು ಮಹಾಪೂಜೆ ನೆರವೇರಿಸಿದರು.
೨೦೨೬ರ ಪರ್ಯಾಯದ ಅವಧಿಯ ಒಳಗಾಗಿ ಕೊಡಗು ಜಿಲ್ಲೆಯಿಂದ ೧೦೮೦೦ ಸಂಖ್ಯೆಯ ಭಗವದ್ಗೀತೆ ಪುಸ್ತಕಗಳನ್ನು ಬರೆದು ಮಠಕ್ಕೆ ನೀಡುವ ಸಂಕಲ್ಪ ಹೊಂದುವ ಗುರಿ ತಮ್ಮದಾಗಿದೆ ಎಂದರು.
ಶ್ರೀಗಳ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಕ್ತ ಕೋಟಿ ಎಲ್ಲರೂ ಒಂದಾಗಿ ದೇವರ ಅನುಗ್ರಹದೊಂದಿಗೆ ಪ್ರಯತ್ನ ಮೂಲಕ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಗಳಿಸಿ ಎಂದು ಹೇಳಿದರು. ಭಗವದ್ಗೀತೆಯನ್ನು ಬರೆಯುವ ಪವಿತ್ರ ಕಾರ್ಯದೊಂದಿಗೆ ಧನ್ಯರಾಗಬಹುದು ಎಂದು ಅವರು ತಿಳಿಸಿದರು.
ಭಗವದ್ಗೀತೆಯ ಪೂರ್ಣಾವಧಿ ಪ್ರಚಾರಕ; ಸಂಕರ್ಷಣ ಪ್ರಮುಖರು ಆಗಿರುವ ವಿದ್ವಾನ್ ರಮಣ ಆಚಾರ್ಯ ಅವರು ಕೋಟಿ ಲೇಖನ ಯಜ್ಞ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಶ್ರೀಗಳ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್ ದಂಪತಿಗಳನ್ನು, ಮತ್ತು ಸಮಿತಿಯ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳಿಗೆ ಶ್ರೀಗಳು ಆಶೀರ್ವದಿಸಿದರು. ಕೋಟಿಗೀತಾ ಲೇಖನ ಯಜ್ಞ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಶ್ರೀಗಳು ಪ್ರಸಾದ ಮಂತ್ರಾಕ್ಷತೆ ವಿತರಿಸಿದರು.