ವೀರಾಜಪೇಟೆ, ಡಿ. ೨೮: ಕೇರಳದ ಬೈತೂರಿನ ಈಶ್ವರ ದೇವಾಲಯದಲ್ಲಿ ಜನವರಿ ಮೂರನೇ ವಾರದಲ್ಲಿ ನಡೆಯಲಿರುವ ಬೈತೂರು ಉತ್ಸವಕ್ಕೆ ಜಿಲ್ಲೆಯ ಭಕ್ತರನ್ನು ಆಹ್ವಾನಿಸಲು ಬೈತೂರು ದೇವಾಲಯದಿಂದ ಕೋಮರತಚ್ಚನ್ ತಾ. ೩೧ ರಿಂದ ಜನವರಿ ೯ರವರೆಗೆ ಕೊಡಗಿನ ವಿವಿಧ ಕಡೆಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಲಿದ್ದಾರೆ ಎಂದು ಬೈತೂರು ತಕ್ಕಮಖ್ಯಸ್ಥ ಪುಗ್ಗೇರ ಪೊನ್ನಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಮರತಚ್ಚನ್ ತಾ. ೩೧ ರಂದು ಬೈತೂರಿನಿಂದ ಹೆಗ್ಗಳ ಭಗವತಿ, ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿ ಅಂದು ಅಲ್ಲಿಯೆ ವಾಸ್ತವ್ಯ ಹೂಡಲಿದ್ದಾರೆ. ಜನವರಿ ೧ ರಂದು ಪ್ರಾತಃಕಾಲ ಭಕ್ತರಿಗೆ ಆಶೀರ್ವಾದ ನೀಡಿ ಬಳಿಕ ಪುಗ್ಗೇರ ನಂದಾ ಗಣಪತಿ ಅವರ ಮನೆಗೆ ತೆರಳಲಿದ್ದಾರೆ. ನಂತರ ಕುಕ್ಲೂರು ಮಾಳೇಟಿರ ಐನ್‌ಮನೆ, ಕೊಳುವಂಡ ಐನ್‌ಮನೆಗೆ ತೆರಳಿ ಈಶ್ವರ ದೇವಾಲಯದಲ್ಲಿ ತಂಗಲಿದ್ದಾರೆ.

ಜನವರಿ ೨ ರಂದು ಪೂರ್ವಾಹ್ನ ದೇವಣಗೇರಿ ಮುಕ್ಕಾಟಿರ ಐನ್‌ಮನೆಗೆ ಭೇಟಿ ನೀಡಿ ದೇವಣಗೇರಿ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪುಗ್ಗೇರ ಐನ್‌ಮನೆಗೆ ಭೇಟಿ ನೀಡಲಿದ್ದಾರೆ. ಸಂಜೆ ಹಾಲುಗುಂದ ಭಗವತಿ ದೇವಾಲಯದಲ್ಲಿ ತಂಗಲಿದ್ದಾರೆ. ಜನವರಿ ೩ ರಂದು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೈತಾಡಿ ಚಪ್ಪಂಡ ಐನ್‌ಮನೆಗೆ ತೆರಳಿ ಅಯ್ಯಪ್ಪ ದೇವಾಲಯ, ಐಚೆಟ್ಟಿರ ಐನ್‌ಮನೆ, ಬೇರೆರ ಐನ್‌ಮನೆಗೆ ತೆರಳಿ ನಂತರ ಕುಂಜಿಲಗೇರಿ ಮುಕ್ಕಾಟಿರ ಐನ್‌ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜನವರಿ ೪ ರಂದು ಮಾತಂಡ ಐನ್‌ಮನೆಗೆ ಭೇಟಿ ನೀಡಿ ಅರಮೇರಿ ಭಗವತಿ ದೇವಾಲಯಲ್ಲಿ ತಂಗಲಿದ್ದಾರೆ. ಜನವರಿ ೫ ರಂದು ಪೂರ್ವಾಹ್ನ ಪಾಲೆಕಂಡ ಐನ್‌ಮನೆಗೆ ಭೇಟಿ ನೀಡಿ ರಾತ್ರಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ. ಜನವರಿ ೬ ರಂದು ಕದನೂರು ಭಗವತಿ ದೇವಾಲಯದಲ್ಲಿ ಪೂಜೆ ಬಳಿಕ ಮಗ್ಗುಲ ಚೋಕಂಡ ಐನ್‌ಮನೆಗೆ ಭೇಟಿ ನಂತರ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪುಲಿಯಂಡ ಐನ್‌ಮನೆಯಲ್ಲಿ ವಾಸ್ತವ್ಯ.

ಜನವರಿ ೭ ರಂದು ಪೂರ್ವಾಹ್ನ ವೀರಾಜಪೇಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಡಿಕೇರಿಯ ಓಂಕಾರೇಶ್ವರ ದೇವಾಲಯಕ್ಕೆ ತೆರಳಿ ಸಂಜೆ ಕೊಡಂದೇರ ಐನ್‌ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ ೮ ರಂದು ಕಾಮೇಯಂಡ ಐನ್‌ಮನೆಗೆ ಭೇಟಿ ನೀಡಿ ಬಳಿಕ ಮಾಚೇಟಿರ ಐನ್‌ಮನೆಯಲ್ಲಿ ವಾಸ್ಯವ್ಯ. ಜನವರಿ ೯ ರಂದು ಬಾಳುಗೋಡು ಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೂರಿರ ಐನ್‌ಮನೆಗೆ ಭೇಟಿ ನೀಡಿ, ಅಮ್ಮಣಕುಟ್ಟಂಡ ಬೋಪಣ್ಣ ಅವರ ಮನೆಗೆ ಭೇಟಿ ನೀಡಿ ಅದೇ ದಿನ ಬೈತೂರು ದೇವಾಲಯಕ್ಕೆ ಹಿಂತಿರುಗಲಿದ್ದಾರೆ. ಹೆಚ್ಚಿನ ವಿವರಗಳಿಗೆ ಪುಗ್ಗೆರ ಪೊನ್ನಪ್ಪ (೯೬೬೩೯೭೭೩೦೪) ಟ್ರಸ್ಟಿ ಮಾಳೇಟಿರ ರತ್ನಾ ಸುಬ್ಬಯ್ಯ (೯೯೦೧೨೦೯೫೩೦) ಇವರುಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಟ್ರಸ್ಟಿ ಮಾಳೇಟಿರ ರತ್ನಾ ಸುಬ್ಬಯ್ಯ, ಬೈತೂರು ಕೊಡವ ಭವನ ಅಧ್ಯಕ್ಷ ಪುಗ್ಗೇರ ರಂಜಿ ದೇವಯ್ಯ, ಚೇಂದAಡ ಶಿವಕುಮಾರ್, ಮಾಳೇಟಿರ ಅಜಿತ್ ಉಪಸ್ಥಿತರಿದ್ದರು.