ಸೋಮವಾರಪೇಟೆ, ಡಿ.೨೮ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರುಗಳಿಗೆ ಮಾನವೀಯತೆಯ ದೃಷ್ಟಿಯಿಂದ ಸಹಾಯ ಮಾಡಲು ಪ.ಪಂ. ಮುಂದಾಗಬೇಕು. ಮಳಿಗೆಗಳ ಟೆಂಡರ್ ಪ್ರಕ್ರಿಯೆಯನ್ನು ಕನಿಷ್ಟ ಒಂದು ವರ್ಷಕ್ಕಾದರೂ ಮುಂದೂಡಬೇಕೆAದು ವರ್ತಕರುಗಳು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುರಾದ ಮಧುಸೂದನ್ ಅವರು, ಪಟ್ಟಣ ಪಂಚಾಯಿತಿ ದಿಢೀರಾಗಿ ಮಳಿಗೆಗಳ ಹರಾಜಿಗೆ ಮುಂದಾಗಿರುವುದರಿAದ ಭಾರೀ ಸಮಸ್ಯೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ವ್ಯಾಪಾರವನ್ನೇ ನಂಬಿಕೊAಡು ಬಂದಿರುವ ೬೦ ಕುಟುಂಬಗಳು ಬೀದಿಪಾಲಾಗಲಿವೆ. ಬೇರೆ ಉದ್ಯೋಗ ತಿಳಿಯದ ಮಂದಿ ಮುಂದೇನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳು ಈಗಾಗಲೇ ಶಿಥಿಲಾವಸ್ಥೆಗೆ ತಲುಪಿವೆ. ಛಾವಣಿ, ಗೋಡೆಗಳು ಕಿತ್ತುಬರುತ್ತಿವೆ. ಪ.ಪಂ.ಗೆ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಯಾವುದೇ ದುರಸ್ತಿ ಕಾರ್ಯ ಮಾಡಿಲ್ಲ. ಇದೀಗ ಆ ಅಂಗಡಿಗಳನ್ನೂ ಸಹ ಟೆಂಡರ್ ಮಾಡಲು ಮುಂದಾಗಿದ್ದಾರೆ ಎಂದ ಅವರು, ಎಲ್ಲಾ ಅಂಗಡಿಗಳ ವರ್ತಕರು ಸಾಲ ಮಾಡಿ ವಸ್ತುಗಳನ್ನು ತುಂಬಿಸಿದ್ದಾರೆ. ಇದರೊಂದಿಗೆ ತಾವುಗಳೂ ಸಹ ಅಂಗಡಿಗಳ ಮೇಲೆ ಸಾಲ ಮಾಡಿಕೊಂಡಿದ್ದಾರೆ. ಇದೀಗ ಏಕಾಏಕಿ ಹೊರ ಹಾಕಿದರೆ ಎಲ್ಲಿಗೆ ಹೋಗುವುದು? ನಮಗಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಅಷ್ಟಕ್ಕಷ್ಟೇ ಇದೆ. ಆದರೂ ನಿಭಾಯಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪ.ಪಂ. ಕಚೇರಿ ಕಟ್ಟಡದಲ್ಲಿಯೇ ಅಂಗಡಿಗಳು ಈಗಲೂ ಖಾಲಿ ಬಿದ್ದಿವೆ. ಈ ಹಿಂದೆ ದುಬಾರಿ ಬಾಡಿಗೆಗೆ ಟೆಂಡರ್ ಕರೆದು ಬಾಡಿಗೆ ಕಟ್ಟಲಾಗದೇ ಹಾಗೆಯೇ ಉಳಿದುಕೊಂಡಿದೆ. ಇವುಗಳನ್ನು ಹರಾಜು ಮಾಡುವ ಬದಲು, ವ್ಯಾಪಾರದಿಂದ ಬದುಕು ಕಟ್ಟಿಕೊಂಡಿರುವ ನಮ್ಮ ಅಂಗಡಿಗಳನ್ನು ಹರಾಜಿಗಿಟ್ಟಿರುವುದು ನೋವು ತಂದಿದೆ ಎಂದು ಗೋಷ್ಠಿಯಲ್ಲಿದ್ದ ಕ್ಯಾಂಟೀನ್ ವರ್ತಕರಾದ ಭವಾನಿ ಹೇಳಿದರು.

ಈಗಿನ ಪರಿಸ್ಥಿತಿಯಲ್ಲಿ ಸಂಸಾರ ನಿಭಾಯಿಸುವುದೇ ಕಷ್ಟವಾಗಿದೆ. ಕೋವಿಡ್ ಸಂದರ್ಭವೂ ಸಹ ನಾವುಗಳು ಉಪವಾಸವಿದ್ದು ಬಾಡಿಗೆ ಪಾವತಿಸಿದ್ದೇವೆ. ಇದೀಗ ಅಂಗಡಿ ಕಳೆದುಕೊಂಡರೆ ಬೇರೆ ದಾರಿಯಿಲ್ಲದೇ ಬುದುಕು ಅಂತ್ಯ ಮಾಡಿಕೊಳ್ಳುವ ದಾರಿ ಹಿಡಿಯಬೇಕಾಗುತ್ತದೆ ಎಂದು ಟೈಲರ್ ರೇಣುಕಾ ಅಳಲು ತೋಡಿಕೊಂಡರು.

ನಾವುಗಳು ಈಗಾಗಲೇ ಮುಂಗಡ ಹಣ ಕಟ್ಟಿದ್ದೇವೆ. ಬಾಡಿಗೆಯನ್ನೂ ಪಾವತಿಸಿಕೊಂಡು ಬಂದಿದ್ದೇವೆ. ಮುಂಗಡ ಹಣ ಹಾಗೂ ಬಾಡಿಗೆಯನ್ನು ಒಂದಿಷ್ಟು ಹೆಚ್ಚು ಮಾಡಿ ನಮಗಳಿಗೆ ಅಂಗಡಿಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ವರ್ತಕರಾದ ಬಾಲಕೃಷ್ಣ ನಂಬಿಯಾರ್ ಇದ್ದರು.