ಮಡಿಕೇರಿ, ಡಿ. ೨೬: ರಾಜ್ಯದ ೧೫ ಕ್ರೀಡಾಪಟುಗಳು ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ (ಕೆ.ಓ.ಎ) ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಲ್ಲಿ ಕೊಡಗಿನವರಾದ ಹಿರಿಯ ಹಾಕಿ ಪಟು, ಮಾಜಿ ಒಲಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ ಹಾಗೂ ಯುವ ಹಾಕಿ ಆಟಗಾರ ಆಭರಣ್ ಸುದೇವ್ ಅವರುಗಳು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರೊಂದಿಗೆ ಹಿರಿಯ ಟೆನ್ನಿಸ್ ಪಟು ರೋಹನ್ ಬೋಪಣ್ಣ ಕೂಡ ಏಷ್ಯನ್ ಗೇಮ್ಸ್ ಸಾಧನೆಗೆ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕ ಒಲಂಪಿಕ್ ಸಂಸ್ಥೆ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದ್ದು, ೧೫ ಕ್ರೀಡಾಪಟುಗಳು ಹಾಗೂ ೪ ಹಿರಿಯ ಕ್ರೀಡಾಪಟುಗಳನ್ನು ಈ ಬಾರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏಷ್ಯನ್ ಗೇಮ್ಸ್ ಸಾಧಕರನ್ನೂ ಗೌರವಿಸಲಾಗಿದೆ.
ಮಂಗಳವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಧಾವರ್ಚಂದ್ ಗೆಹ್ಲೋಟ್ ಪ್ರಶಸ್ತಿ ವಿತರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಸಚಿವ ಬಿ. ನಾಗೇಂದ್ರ ಕೆ.ಓ.ಎ. ಅಧ್ಯಕ್ಷ ಡಾ.ಕೆ. ಗೋವಿಂದರಾಜ್ ಮತ್ತಿತರರು ಪಾಲ್ಗೊಂಡಿದ್ದರು. ಪ್ರಶಸ್ತಿ ರೂ. ೧ ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.